ಕಿರೇಸೂರು: ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ ಗಾಯ
ಹುಬ್ಬಳ್ಳಿ, ಜೂನ್, 16: ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿಯೋರ್ವ ಧಾರುಣವಾಗಿ ಸಾವನ್ನಪ್ಪಿದ್ದು, ಮತ್ತೋರ್ವ ವಿಧ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.
ವಿಶೃತ್ ಬೆಳಗಲಿ (9) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಪ್ರಜ್ವಲ್ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಟವಾಡುವ ಸಂದರ್ಭ ಏಕಾಏಕಿ ಗೋಡೆ ಕುಸಿದು ಬಿದ್ದು ಈ ಘಟನೆ ನಡೆದಿದೆ. ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಅಪಘಾತಕ್ಕೆ ತುತ್ತಾಗಿದ್ದಾರೆ.

ನಿರ್ಮಾಣ ಹಂತದ ಕಟ್ಟಡದ ಕೆಳಗೆ ಆಡವಾಡುವಾಗ ಈ ಘಟನೆ ನಡೆದಿದ್ದು, ಸ್ಥಳದಲ್ಲೇ ವಿದ್ಯಾರ್ಥಿ ವಿಶೃತ್ ಬೆಳಗಲಿ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕಳಪೆ ಕಾಮಗಾರಿ: ಸ್ಥಳೀಯರು ಆಕ್ರೋಶ
ಕೋಟಿ ಕೋಟಿ ವೆಚ್ಚದಲ್ಲಿ ಮುಂಡಗೋಡ ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡನ್ನು ದುರಸ್ತಿ ಕಾರ್ಯ ಮಾಡಿದರು. ಆದರೆ ಎರಡೇ ವರ್ಷದಲ್ಲಿ ಒಡ್ಡು ಬಿರುಕು ಬಿಟ್ಟಿದ್ದು, ಇದೀಗ ಸಣ್ಣ ನೀರಾವರಿ ಇಲಾಖೆಯ ಕಳಪೆ ಕಾಮಗಾರಿಗೆ ಇತ್ತೀಚೆಗಷ್ಟೇ ಇಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.
ಮೊದಲು 2007ರ ಆಗಸ್ಟ್ 14ರಂದು ಮತ್ತು 2019ರ ಆಗಸ್ಟ್ 12ರಂದು ಎರಡನೇ ಬಾರಿ ಚಿಗಳ್ಳಿ ಜಲಾಶಯದ ಒಡ್ಡು ಒಡೆದು ಅಕ್ಕ-ಪಕ್ಕದ ಹೊಲ-ಗದ್ದೆಗಳ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ನಂತರ ಸುಮಾರು 9 ಕೋಟಿ ರೂಪಾಯಿ ಪ್ರವಾಹ ಅನುದಾನದಡಿ ಸಣ್ಣ ನೀರಾವರಿ ಇಲಾಖೆಯವರು ಜಲಾಶಯದ ಒಡ್ಡು ದುರಸ್ತಿ ಕಾಮಗಾರಿಯನ್ನು 2021ರಲ್ಲಿ ಪೂರ್ಣಗೊಳಿಸಿದ್ದರು. ದುರಸ್ತಿ ಕಾಮಗಾರಿ ಮುಗಿಸಿ ಕೇವಲ ಎರಡೇ ವರ್ಷಗಳಲ್ಲಿ ಒಡ್ಡಿನ ಮೇಲೆ ಬಿರುಕು ಕಾಣಿಸಿಕೊಂಡಿದೆ.
ಸುಮಾರು ಒಂದು ಕಿಲೋ ಮೀಟರ್ ದೂರದಷ್ಟು ಒಡ್ಡು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, 1ರಿಂದ 2 ಅಡಿ ಆಳದಷ್ಟು ತಗ್ಗು ಬಿದ್ದಿದೆ. ಕೆಲವೊಂದು ಕಡೆ ಮಧ್ಯಭಾಗದಲ್ಲಿ, ಎಡ ಭಾಗದಲ್ಲಿ ಮತ್ತು ಕೆಲವು ಕಡೆ ಬಲಭಾಗದಲ್ಲಿ ಒಡ್ಡು ಬಿರುಕು ಬಿಟ್ಟಿದೆ. ಹಾಗೆಯೇ ಒಡ್ಡಿನ ಎರಡೂ ಬದಿಗಳಲ್ಲಿ ಮಣ್ಣು ಕುಸಿಯುತ್ತಿದೆ. ಇದರಿಂದ ಒಡ್ಡಿನ ದಂಡೆಯ ಮೇಲೆ ಅಕ್ಕ-ಪಕ್ಕಕ್ಕೆ ನಿಲ್ಲಿಸಿದ ತಡೆ ಕಲ್ಲುಗಳು ಕುಸಿದು ಬೀಳುವ ಹಂತದಲ್ಲಿವೆ.
ಇನ್ನು ಮಳೆಗಾಲ ಆರಂಭ ಆದರೆ ಮಳೆಯ ನೀರಿನ ರಭಸಕ್ಕೆ ಬಿರುಕು ದೊಡ್ಡದಾಗಿ ಒಡ್ಡಿನ ಮಣ್ಣು ಕುಸಿಯುವಿಕೆ ಜಾಸ್ತಿ ಆಗುತ್ತದೆ. ಇದರಿಂದ ಒಡ್ಡಿಗೂ ಅಪಾಯ ತಪ್ಪಿದ್ದಲ್ಲ. ಮತ್ತೊಮ್ಮೆ ಒಡ್ಡು ಒಡೆಯವ ಮುನ್ನ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.
ಸುಮಾರು 9 ಕೋಟಿ ರೂಪಾಯಿ ವೆಚ್ಚದ ಸರ್ಕಾರದ ಅನುದಾನದಲ್ಲಿ ಆದ ಚಿಗಳ್ಳಿ ಜಲಾಶಯದ ಕಾಮಗಾರಿ ಕಳಪೆ ಆಗಿದ್ದು, ಡ್ಯಾಂನಲ್ಲಿ ನೀರು ತುಂಬುವ ಮುಂಚೆಯೇ ಕಿಲೋ ಮೀಟರ್‌ನಷ್ಟು ಉದ್ದದ ಬಿರುಕು ಬಿದ್ದಿದೆ. ಇನ್ನು ಮಳೆಗಾಲದ ನೀರು ಬಿರುಕು ತುಂಬಿ ಪುನಃ ಡ್ಯಾಂ ಒಡೆಯುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಇಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.
ಆದ್ದರಿಂದ ಇದಕ್ಕೆ ಸಂಬಧಪಟ್ಟ ಇಲಾಖೆಯವರು ಮತ್ತು ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಉತ್ತಮ ದುರಸ್ತಿ ಕಾಮಗಾರಿ ಮಾಡಿಸಬೇಕು. ಈ ಹಿಂದೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಬಿಲ್ ತಡೆಹಿಡಿಯಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಲ್.ಟಿ.ಪಾಟೀಲ್ ಆಗ್ರಹಿಸಿದ್ದರು.












Click it and Unblock the Notifications