ಬಸವರಾಜ ಬೊಮ್ಮಾಯಿಯವರೇ ಮೊದ್ಲು ಚಿಲ್ಲರೆ ಮಾತು ನಿಲ್ಲಿಸಿ: ಸಚಿವ ಎಂ.ಬಿ.ಪಾಟೀಲ್
ಹುಬ್ಬಳ್ಳಿ, ಆಗಸ್ಟ್, 23: ಬಾಂಬೆ ಬಾಯ್ ಸೇರಿದಂತೆ ಭಾರತೀಯ ಜನತಾ ಪಕ್ಷ ಹಾಗೂ ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರದಲ್ಲಿ ನಾವು ಸ್ಪಷ್ಟತೆ ಹೊಂದಿದ್ದು, ಎಲ್ಲರನ್ನೂ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ. ಹಾಗೂ ಆಪರೇಷನ್ ಹಸ್ತ ಮಾಡಲ್ಲ ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾವು ಅಪರೇಷನ್ ಹಸ್ತ ಮಾಡಲ್ಲ. ಭಾರತೀಯ ಜನತಾ ಪಕ್ಷದಲ್ಲಿ ಕೆಲವರು ಕಾಂಗ್ರೆಸ್ ಜೊತೆಗೆ ಬರಲಿಕ್ಕೆ ಮುಂದಾಗಿದ್ದಾರೆ. ಭಾರತೀಯ ಜನತಾ ಪಕ್ಷದದಲ್ಲಿ ಸಂಘಟನೆ ಇಲ್ಲ. ಅಲ್ಲಿ ಸರಿಯಾದ ನಾಯಕರಿಲ್ಲ. ಆದ್ದರಿಂದ ಅಲ್ಲಿನ ಕೆಲವರು ಬೇಸತ್ತು ಹೋಗಿದ್ದಾರೆ ಎಂದರು.

ಈಗ ನಾವು ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಕೆಲವರನ್ನೇ ಮಾತ್ರ ಮಾಡಿಕೊಳ್ಳುತ್ತೇವೆ. ಅದರಲ್ಲಿ ಯಾರನ್ನು ಕರೆದುಕೊಳ್ಳಬೇಕು ಅಂತಾ ಚಿಂತನೆ ನಡೆದಿದೆ. ಈ ಬಗ್ಗೆ ನಮ್ಮ ಪಕ್ಷದ ಹಿರಿಯ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ಧಾರ ಆದ ಮೇಲೆ ಎಲ್ಲರ ಸಲಹೆ ಪಡೆದುಕೊಳ್ಳಲಾಗುವುದು ಎಂದರು.
ಚಿಲ್ಲರೆ ಹೇಳಿಕೆ ಶೋಭೆ ತರುವುದಿಲ್ಲ
ಎಸ್‌ಇಪಿ ಎಂದರೆ ಸೋನಿಯಾ ಗಾಂಧಿ ಎಜುಕೇಶನ್ ಪಾಲಿಸಿ ಅಂತಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಚಿಲ್ಲರೆ ಹೇಳಿಕೆ ಕೊಡುವುದು ಎಷ್ಟು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಹೊಸ ಶಿಕ್ಷಣ ನೀತಿಯಲ್ಲಿ ನಮ್ಮದೇ ಆದ ಕನಸು ಇದೆ. ನಮ್ಮದೇ ಆದ ಒಂದು ಸ್ಪಷ್ಟ ನಿಲುವು ಇದೆ. ನಾವು ಅನ್ನಬಹುದು ಅಲ್ಲಾ ಯಾವುದೇ ಇದೊಂದು ಆರ್ ಎಸ್‌ಎಸ್ ಶಿಕ್ಷಣ ನೀತಿ ಅಥವಾ ನಾಗಪುರ ಶಿಕ್ಷಣ ನೀತಿ ಅಂತಾ. ಆದರೆ ನಾವು ಹಾಗೆ ಮಾಡುವುದಿಲ್ಲ. ಯಾವುದೇ ವ್ಯಕ್ತಿಯ ಹೆಸರು ಬಳಕೆ ಬೇಡ. ಸೋನಿಯಾ ಗಾಂಧಿ ಅವರ ಹೆಸರು ಯಾಕೆ ಬಳಕೆ ಮಾಡುತ್ತಾರೆ ಎಂದರು.
ಸಿಎಂ ಬದಲಾವಣೆ ಈಗ ಇಲ್ಲ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಸ್ತಿ ಹಂಚಿಕೆ ಒಬ್ಬರಿಗೆ ಮಾಡಲು ಹೇಗೆ ಸಾಧ್ಯ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಈಗ ಇಲ್ಲ. ಇನ್ನು ಇಂತಹ ನಿರ್ಧಾರವನ್ನು ನಮ್ಮ ಹೈಕಮಾಂಡ್ ಹಾಗೂ ಹಿರಿಯ ನಾಯಕರು ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕಾ ಅಭಿವೃದ್ಧಿ 9 ವಿಷನ್ ವಲಯ ಸ್ಥಾಪನೆ
ರಾಜ್ಯದಲ್ಲಿ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಒಟ್ಟು 9 ಪ್ರತ್ಯೇಕ ವಿಷನ್ ಗ್ರೂಪ್ ರಚನೆ ಮಾಡಲಾಗುತ್ತಿದೆ. ರಾಜ್ಯದಲ್ಲಿನ ಕೈಗಾರಿಕಾ ವಲಯಗಳಲ್ಲಿ ಮೊದಲು 7 ಸೆಕ್ಟರ್‌ಗಳನ್ನು ಗುರುತಿಸಲಾಗಿತ್ತು. ಈಗ ಇನ್ನೂ ಎರಡು ಮಾಡಿ ಅಂದರೆ ಒಟ್ಟು 9 ವಿಷನ್ ಗ್ರೂಪ್ ಮಾಡಲಾಗಿದೆ. ಅವುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸದಾಗಿ ವಿಷನ್ ಗ್ರೂಪ್ ಆಗಿದೆ. ಈ ಮೂಲಕ ಯೋಜನೆ ರೂಪಿಸಲಾಗುತ್ತದೆ ಎಂದರು.
ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಹಾಲಿ ಇರುವ ಕೈಗಾರಿಕಾ ನೀತಿಯಲ್ಲೂ ಬದಲಾವಣೆ ತರುವ ಉದ್ದೇಶವಿದೆ. ಕೈಗಾರಿಕೆಗಳ ಬೆಳವಣಿಗೆಗಳ ಅಗತ್ಯಕ್ಕೆ ತಕ್ಕಂತೆ ನೀತಿಯಲ್ಲಿನ ಕೆಲ ಅಂಶಗಳನ್ನು ತೆಗೆದು, ಹೊಸದಾಗಿ ಕೆಲ ಅಂಶಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.











Click it and Unblock the Notifications