ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ
ಹುಬ್ಬಳ್ಳಿ, ಮಾರ್ಚ್ 20 : ಕೊರೊನಾ ಹರಡುವುದನ್ನು ತಡೆಯಲು ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಮಾರ್ಚ್ 20ರ ಶುಕ್ರವಾರದಿಂದ ಮಾರ್ಚ್ 31ರ ತನಕ ರೈಲುಗಳ ಸಂಚಾರ ಇರುವುದಿಲ್ಲ.
ಈಗಾಗಲೇ ಪೂರ್ವ, ಪಶ್ಚಿಮ, ಸೆಂಟ್ರಲ್ ರೈಲ್ವೆ ವಲಯಗಳು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಿವೆ. ಈಗ ನೈಋತ್ಯ ರೈಲ್ವೆ ಸಹ ರೈಲುಗಳನ್ನು ರದ್ದುಗೊಳಿಸಿದ್ದು, ಮುಂಗಡ ಟಿಕೆಟ್ ಬುಕ್ ಮಾಡಿದವರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುತ್ತಿದೆ.
ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರ ಖಾತೆಗೆ ಟಿಕೆಟ್ ಹಣ ಜಮಾವಣೆಯಾಗಲಿದೆ. ಕೌಂಟರ್‌ನಲ್ಲಿ ಮುಂಗಡ ಟಿಕೆಟ್ ಪಡೆದ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಕಳಿಸಲಾಗುತ್ತದೆ. ಅವರು ಹಣ ವಾಪಸ್ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರದ್ದಾಗಿರುವ ರೈಲುಗಳ ವಿವರ : ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದುಗೊಳಿಸಲಾಗಿದೆ.
ವಾರಕ್ಕೊಮ್ಮೆ ಸಂಚಾರ ನಡೆಸುವ ಯಶವಂತಪುರ-ಪಂಢರಪುರ ಮತ್ತು ಮೈಸೂರು-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕೂಡ ರದ್ದಾಗಿದೆ.
ಬೆಳಗಾವಿ-ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದು ಪಡಿಸಲಾಗಿದೆ.
ಪ್ರತಿದಿನ ಸಂಚಾರ ನಡೆಸುವ ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್, ಮೈಸೂರು-ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್, ವಾರದಲ್ಲಿ 4 ದಿನ ಸಂಚಾರ ನಡೆಸುವಶ ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಳು ಸಂಚರಿಸುವುದಿಲ್ಲ.
ವಾರಕ್ಕೊಮ್ಮೆ ಸಂಚಾರ ನಡೆಸುವ ಮೈಸೂರು-ರೇಣಗುಂಟಾ ಎಕ್ಸ್‌ಪ್ರೆಸ್, ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications