Soppu Mela 2024: ಹುಬ್ಬಳ್ಳಿಯಲ್ಲಿ 2 ದಿನ 'ಬೃಹತ್ 'ಸೊಪ್ಪು ಮೇಳ'
ಹುಬ್ಬಳ್ಳಿ, ಅಕ್ಟೋಬರ್ 16: ನೀವು ಮಾವು ಮೇಳ, ಹಲಸು ಮೇಳೆ, ಕೃಷಿ ಮೇಳ ಕೇಳಿರುತ್ತೀರಿ. ಆದರೆ ಸೊಪ್ಪಿನ ಮೇಳ ಬಗ್ಗೆ ಕೇಳಿದ್ದೀರಿಯೇ. ಕೆಳಿಲ್ಲವಾದರೆ, ಮುಂದಿನ ವಾರ ಹುಬ್ಬಳ್ಳಿಯಲ್ಲಿ ಜರುಗಲಿರುವ ವೈವಿಧ್ಯಮಯ ತಳಿಗಳ ಸೊಪ್ಪು ಪ್ರದರ್ಶನಕ್ಕೆ ಭೇಟಿ ನೀಡಬಹುದು. ಏಕೆಂದರೆ ಎರಡು ದಿನ ಇಲ್ಲಿ 'ಸೊಪ್ಪಿನ ಮೇಳ' ಆಯೋಜನೆ ಮಾಡಲಾಗಿದೆ. ಔಷಧಿ ಗುಣಗಳಿರುವ ಎಲ್ಲ ಬಗೆಯ ಸೊಪ್ಪುಗಳ ಬಗ್ಗೆ ಮಾಹಿತಿ ತಿಳಿಯುವುದರ ಜೊತೆಗೆ ಖರೀದಿಸಲೂ ಬಹುದು.
ವೈವಿಧ್ಯಮಯ ಸೊಪ್ಪಿನ ಲೋಕದಲ್ಲಿ ನಾನಾ ನಮೂನೆಯ ಸೊಪ್ಪುಗಳಿವೆ. ಕೆಲವರಂತು ನಿತ್ಯ ಸೊಪ್ಪುಗಳಿಲ್ಲದೇ ಆಹಾರವನ್ನೇ ಸೇವಿಸುವುದಿಲ್ಲ. ಸಸ್ಯಹಾರಿಗಳ ನೆಚ್ಚಿನ ಈ ಸೊಪ್ಪಿಗೆ ಕಾಯಿಲೆ ಗುಣಮಾಡುವ ಸಾಮರ್ಥ್ಯ ಇದೆ. ಇಂತಹ 'ಸೊಪ್ಪುಗಳ ಮೇಳ'ವು ಇದೇ ಅಕ್ಟೋಬರ್ 19 ಮತ್ತು 20 ರಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಮೂಜಗಂ ಸಭಾ ಭವನದಲ್ಲಿ ನಡೆಯಲಿದೆ. ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್ ಸೊಪ್ಪಿನ ಮೇಳವನ್ನು ಉದ್ಘಾಟಿಸಲಿದ್ದಾರೆ. ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ 'ಸಕತ್ ಸೊಪ್ಪು' ಪುಸ್ತಕ ಬಿಡುಗಡೆಗೊಳ್ಳಲಿದೆ.
ಪ್ರಮುಖ ಸೊಪ್ಪುಗಳ ತಳಿಗಳು
ಈ ಮೇಳದಲ್ಲಿ ಪ್ರಮುಖ ಸೊಪ್ಪುಗಳಾದ ದಂಟು,ರಾಜಗೀರ, ಹರಿವೆ, ಹಕ್ಕರಕಿ, ಅಣ್ಣೇ ಸೊಪ್ಪು, ಕಿರಿಕಸಾಲಿ, ಸೊಕ್ಕತ್ತಿ ...ಹೀಗೆ ನೂರಾರು ಬಗೆಯ ಸೊಪ್ಪಿನ ತಳಿಗಳು ಪ್ರದರ್ಶನ ಇಲ್ಲಿರಲಿವೆ. ಹೊಲ ಗದ್ದೆಗಳಲ್ಲಿ ತಾನಾಗಿ ಹುಟ್ಟಿ ಬೆಳೆಯುವ 'ಕಳೆ' ಎಂದು ನಿರ್ಲಕ್ಷಕ್ಕೆ ಗುರಿಯಾದ ಹಲವಾರು ಸೊಪ್ಪಿನ ತಳಿಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳನ್ನು ನಿರಂತರವಾಗಿ ಸೇವಿಸಿದರೆ ಆರೋಗ್ಯ ಸುಧಾರಣೆ ಆಗುತ್ತದೆ.
ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೊಪ್ಪಿನ ಪಾತ್ರ ಹಿರಿದು. ಸೊಪ್ಪು ದೇಹಕ್ಕೆ ಬೇಕಾದ ಪೋಷಣೆ ಹಾಗೂ ಚೈತನ್ಯವನ್ನು ನೀಡುತ್ತದೆ; ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾರಿನಿಂದ ಸಮೃದ್ಧವಾಗಿರುವ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆ, ಮಧು ಮೇಹ ರಕ್ತಹೀನತೆ, ಅಪೌಷ್ಟಿಕತೆ ಮತ್ತು ಇತರೆ ಹಳೆಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.
ಸೊಪ್ಪಿನ ಬಗ್ಗೆ ಮೇಳದಲ್ಲಿ ಅರಿವು, ಜಾಗೃತಿ
ಕೃಷಿಯಲ್ಲಿ ಇತ್ತೀಚಿನಗೆ ಕೀಟ ನಾಶಕ, ಗೊಬ್ಬರದ ಬಳಕೆ ತೀವ್ರವಾಗಿ ಹೆಚ್ಚಾಗಿದೆ. ಅನ್ನದ ಬಟ್ಟಲು ತುಂಬುತ್ತಿದ್ದ ಕಳೆ ಸೊಪ್ಪುಗಳು ಕಳೆನಾಶಕದ ಅವಾಂತರಕ್ಕೆ ಸಿಕ್ಕಿ ನಾಶವಾಗುತ್ತಿವೆ. ಔಷಧೀಯ ಖಜಾನೆ ಎನಿಸಿದ, ನಿಸರ್ಗದ ಕೊಡುಗೆಯಾದ ಸೊಪ್ಪಿನ ವೈವಿಧ್ಯದ ಬಗ್ಗೆ ಅರಿವು ಮೂಡಿಸಲು ಈ ಸೊಪ್ಪಿನ ಮೇಳೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಸೊಪ್ಪಿನ ಮೇಳದಲ್ಲಿ ನೂರಕ್ಕೂ ಹೆಚ್ಚಿನ ಸೊಪ್ಪುಗಳು ಪ್ರದರ್ಶನಕ್ಕೆ ಬರಲಿವೆ. ಗೋಕರ್ಣದ ಕೆಂಪು ಹರಿವೆ, ನಾಗರಹೊಳೆ ಕಾಡಿನ ಬೆರಕೆ ಸೊಪ್ಪು, ಮಲೆನಾಡಿನ ಔಷಧೀಯ ಸೊಪ್ಪುಗಳು, ಉತ್ತರ ಕರ್ನಾಟಕದ ತೊಪ್ಪಲು ಪಲ್ಲೆ ,ಹೊಸ ತಲೆಮಾರಿನ ಲೆಟ್ಯೂಸ್ ನಂಥ ಸೊಪ್ಪುಗಳು ಮೇಳದಲ್ಲಿರಲಿವೆ.
ಮೇಳದಲ್ಲಿ ವಿವಿಧ ಕಾರ್ಯಕ್ರಮಗಳು
ಮೇಳದಲ್ಲಿ ಅ.19ರಂದು ಮಧ್ಯಾಹ್ನ 12ಕ್ಕೆ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಮುರಳೀಧರ್ ಗುಂಗುರುಮಳೆ 'ಅಜ್ಜಿಯ ಮಡಿಲು- ಸೊಪ್ಪಿನ ಕಡಲು' ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹೊಲ,ಬೇಲಿ,ಗದ್ದೆ,ಕಾಡು ಮತ್ತು ರಸ್ತೆ ಬದಿಗಳಲ್ಲಿ ಸಿಗುವ ನಿಸರ್ಗದತ್ತ ಸೊಪ್ಪಿನ ತಳಿಗಳನ್ನು ಇವರು ಪರಿಚಯಿಸಲಿದ್ದಾರೆ.
ಇನ್ನೂ ಭಾನುವಾರ ಬೆಳಗ್ಗೆ 10.30 ಗಂಟೆಗೆ ಹುಬ್ಬಳ್ಳಿಯ ರೋಟರಿ ಕ್ಲಬ್ ಸಹಕಾರದಲ್ಲಿ 5 ರಿಂದ 12 ವರ್ಷದ ಮಕ್ಕಳಿಗಾಗಿ ಎರಡು ವಿಭಾಗದಲ್ಲಿ 'ನಾ ಕಂಡಂತೆ ಸೊಪ್ಪು' ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸೊಪ್ಪಿನ ಕೃಷಿ, ಸೊಪ್ಪಿನ ಅಡುಗೆ, ಸೊಪ್ಪಿನ ಸಂಸ್ಕೃತಿ ಮತ್ತು ಮಾರುಕಟ್ಟೆಯ ಸೊಪ್ಪಿನ ಲೋಕವನ್ನು ಮಕ್ಕಳು ಚಿತ್ರದ ಮೂಲಕ ಅನಾವರಣಗೊಳಿಸಲಿದ್ದಾರೆ. ಚಿತ್ರಕಲೆಯಲ್ಲಿ ಭಾಗವಹಿಸುವವು ಬಣ್ಣಗಳನ್ನು ತಾವೇ ತರಬೇಕಿದೆ. ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.
ಸೊಪ್ಪಿನ ಅಡುಗೆಗಳನ್ನು ಪ್ರದರ್ಶಿಸಿ, ಅದರ ಬಗ್ಗೆ ಮಾಹಿತಿ ನೀಡಲು ಆಸಕ್ತರಾದ ಪಾಕ ಪ್ರವೀಣರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತ ಮತ್ತು ಮಹಿಳಾ ಗುಂಪುಗಳು, ಕೃಷಿ ಉದ್ದಿಮೆದಾರರು ಮತ್ತು ರೈತ ಕಂಪನಿಗಳು ಸಾವಯವ, ಸಿರಿಧಾನ್ಯ ಮತ್ತು ಮೌಲ್ಯವರ್ಧಿತ ಪದಾರ್ಥಗಳ ಮಾರಟ ಮಾಡಲಿದ್ದಾರೆ. ಹಣ್ಣುಗಳು, ಸೊಪ್ಪುಗಳ ಖರೀದಿಗೆ ಇಲ್ಲಿ ಅವಕಾಶ ಇದೆ.












Click it and Unblock the Notifications