ಮೀಸಲಾತಿ ಹೆಚ್ಚಳ: ಏ.6ರಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಅಭಿನಂದನಾ ಸಮಾರಂಭ
ಹುಬ್ಬಳ್ಳಿ, ಏಪ್ರಿಲ್ 04: ಬಿಜೆಪಿ ಸರ್ಕಾರಕ್ಕೆ ಎಸ್‌ಸಿ, ಎಸ್‌ಟಿ ಸಮಾಜದಿಂದ ಅಭಿನಂದನಾ ಸಮಾರಂಭವನ್ನು ಇದೇ 6ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಡು ಮೆಟ್ಟಿದ ನಾಡನಲ್ಲಿ ಅಭಿನಂದನಾ ಸಮಾರಂಭ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರು ಇದು ಸರಿ ಇಲ್ಲ ನಾವು ಈ ಮೀಸಲಾತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಿ, ಒಳ ಮೀಸಲಾತಿಗೆ ಸೇರಿಸಿದ್ದಾರೆ. ಸಿದ್ದರಾಮಯ್ಯನವರಿಗೆ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್‌ನ ನಿಜ ಬಣ್ಣ ಈಗ ಬಯಲಾಗಿದೆ. ಜನರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿದವರಿಗೆ ಜನರ ಬಗ್ಗೆ ಏನು ಗೊತ್ತಿರಲು ಸಾಧ್ಯ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಸಚಿವರಾದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಚಾಲೆಂಜ್ ಸ್ವೀಕರಿಸಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ: ಛಲವಾದಿ ನಾರಾಯಣಸ್ವಾಮಿ
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಬಂಜಾರ ಸಮಾಜದ ಕೆಲವು ಕಿಡಗೇಡಿಗಳ ಮೂಲಕ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ನಾಯಕರಿಗೆ ನೈತಿಕತೆಯೇ ಇಲ್ಲ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಮೀಸಲಾತಿ ಹೆಚ್ಚಳ ಮಾಡುವಂತೆ ಚಾಲೆಂಜ್ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಮೊದಲಿಗೆ ಕೇವಲ ಆರು ಜಾತಿಗಳಿದ್ದವು, ಆದರೆ ಈಗ ಸುಮಾರು 101 ಜಾತಿಗಳಿವೆ, ಈ ಜಾತಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಆದರೆ ಬಿಜೆಪಿ ಸರ್ಕಾರ ಅವರೆಲ್ಲರಿಗೂ ಅನ್ಯಾಯ ಮಾಡದಂತೆ ನ್ಯಾಯಯುತವಾಗಿ ಮೀಸಲಾತಿ ನೀಡಿದೆ ಎಂದರು.
ಮೀಸಲಾತಿಗೆ ಮೊದಲು ವಿರೋಧ ಕೇಳಿ ಬಂದಿತ್ತು. ಆದರೆ ಈ ಮೀಸಲಾತಿ ವಿಚಾರ ಮನವರಿಕೆಯಾದ ಬೆನ್ನಲ್ಲೇ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಕೆಲ ಸಮುದಾಯವನ್ನು ಎತ್ತಿ ಕಟ್ಟಿ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕುತೂಹಲಕ್ಕೆ ಕಾರಣವಾದ ಬಿಜೆಪಿ ನಾಯಕರ ಸಿಕ್ರೇಟ್ ಮೀಟಿಂಗ್..!
ಹುಬ್ಬಳ್ಳಿ: ಬೆಳಗಾವಿಯ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದು, ಬಿಜೆಪಿಯ ಅತೃಪ್ತ ನಾಯಕರು ಒಂದೇ ಕಡೆಯೇ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ಮತ್ತಿತರರು ಭೇಟಿಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹುಬ್ಬಳ್ಳಿಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಬಿಜೆಪಿ ನಾಯಕರು ರಹಸ್ಯವಾಗಿ ಸಭೆ ನಡೆಸಿದ್ದಾರೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಬಾರಿಯ ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ಹಾಗೂ ಇತರ ವಿಚಾರಗಳ ಬಗ್ಗೆ ಸಭೆ ನಡೆದಿದೆ ಎನ್ನಲಾಗಿದೆ.
ಚುನಾವಣಾ ದಿನಾಂಕ ಘೋಷಣೆಯಾದರೂ ಇನ್ನೂ ಅಭ್ಯರ್ಥಿ ಘೋಷಿಸದ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ಹಿರಿಯ ಮುಖಂಡರ ಸಭೆ ತೀವ್ರ ಕೆರಳಿಸಿದೆ.












Click it and Unblock the Notifications