ಉದಯನಿಧಿ ಇನ್ನೂ ಕಣ್ಣೇ ಬಿಟ್ಟಿಲ್ಲ, ಅವನೊಬ್ಬ ಬಚ್ಚ: ಪ್ರಮೋದ್ ಮುತಾಲಿಕ್ ಹೀಗೆ ಹೇಳಿದ್ದೇಕೆ?
ಧಾರವಾಡ, ಸೆಪ್ಟೆಂಬರ್, 04: ಸನಾತನ ಧರ್ಮ ಶಾಂತಿಯ ಸಂದೇಶ ಸಾರುತ್ತದೆಯೇ ಹೊರತು, ಅದು ಡೆಂಗ್ಯೂ, ಮಲೇರಿಯಾದಂತೆ ರೋಗ ಹರಡುವ ಸೊಳ್ಳೆಯಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉದಯನಿಧಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಉದಯನಿಧಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾದಂತೆ ನಾಶ ಮಾಡಬೇಕು ಎಂದು ಹೇಳುವುದು ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುತ್ತದೆ. ಇದನ್ನು ನಾವು ಖಂಡಿಸುತ್ತೇವೆ. ಉದಯನಿಧಿ ಇನ್ನೂ ಕಣ್ಣೇ ಬಿಟ್ಟಿಲ್ಲ, ಅವನೊಬ್ಬ ಬಚ್ಚ. ಆದರೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸನಾತನ ಧರ್ಮ ಶಾಂತಿಯ ಸಂದೇಶ ಸಾರುತ್ತದೆಯೇ ಹೊರತು, ಅದು ಡೆಂಗ್ಯೂ, ಮಲೇರಿಯಾದಂತೆ ರೋಗ ಹರಡುವ ಸೊಳ್ಳೆಯಲ್ಲ. ಸನಾತನ ಧರ್ಮ ಗಂಧದ ಮರ ಇದ್ದಂತೆ. ಅದನ್ನು ನಾಶ ಮಾಡಲು ಹೋದಷ್ಟೂ ಸುಗಂಧ ಹರಡುತ್ತದೆ ಎಂದು ಹೇಳಿದ್ದಾರೆ.
ಪೆರಿಯಾರ್‌ನಿಂದ ಹಿಡಿದು ಇಲ್ಲಿಯವರೆಗೂ ನಾಸ್ತಿಕವಾದ ಮಾಡುತ್ತಾ ಬಂದಿದ್ದಾರೆ. ಇವರ ಈ ಹೇಳಿಕೆಯಿಂದ ದೊಡ್ಡ ಅನಾಹುತ ಆಗುತ್ತದೆ. ನಿಮ್ಮ ರಾಜಕೀಯ ವ್ಯವಸ್ಥೆ ನಾಶವಾಗುತ್ತದೆ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಈ ಸಂಬಂಧ ಅವರ ವಿರುದ್ಧ ಧಾರವಾಡ, ಬೆಂಗಳೂರು ಹಾಗೂ ಕಲಬುರಗಿ ಕೋರ್ಟ್‌ಗಳಲ್ಲಿ ಕೇಸ್ ದಾಖಲಿಸಲಿದ್ದೇವೆ ಎಂದರು.
ಯಶ್‌ಪಾಲ್ ಸುವರ್ಣ ಆಕ್ರೋಶ
ತಮಿಳುನಾಡು ಮುಖ್ಯಮಂತ್ರಿ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಭಾರತದ ಸಾಮಾಜಿಕ ವ್ಯವಸ್ಥೆಯ ಹೆಮ್ಮೆಯ ಪ್ರತೀಕವಾದ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಮಸ್ತ ಹಿಂದೂ ಸಮಾಜಕ್ಕೆ ಅವಮಾನಿಸಿದ್ದಾರೆ. ಈ ಮೂಲಕ INDIA ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವು ಬಹಿರಂಗವಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ನಿರ್ಧಿಷ್ಟ ಸಮುದಾಯದ ಓಲೈಕೆಗಾಗಿ ಹಿಂದೂ ದ್ವೇಷಿ ಹೇಳಿಕೆಯ ಮೂಲಕ ಸನಾತನ ಧರ್ಮ ಅಪಮಾನಿಸಲು ಮುಂದಾಗಿದ್ದಾರೆ. ಈ ಹಿಂದೆ ಬ್ರಿಟಿಷರು, ಮುಸ್ಲಿಂ ಮತಾಂಧ ರಾಜರು ಮತಾಂತರ, ದಬ್ಬಾಳಿಕೆಯ ಮೂಲಕ ಸನಾತನ ಧರ್ಮದ ನಿರ್ಮೂಲನೆಗೆ ವಿಫಲ ಪ್ರಯತ್ನಕ್ಕೆ ಮುಂದಾಗಿದ್ದರು. ಇದೀಗ ಅದೇ ಮನಸ್ಥಿತಿಯಲ್ಲಿ ಉದಯನಿಧಿ ಈ ಹೇಳಿಕೆಯ ಮೂಲಕ ಮಹಮ್ಮದ್ ಘೋರಿ, ಘಜನಿ ವಂಶದ ಪರಂಪರೆಯನ್ನು ಮುಂದುವರಿಸುವ ಕಾಯಕದಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು.
ಸನಾತನ ಧರ್ಮ ಕೇವಲ ಒಂದು ಧರ್ಮವಾಗಿರದೇ ಭಾರತದ ಜನರ ಜೀವನ ಪದ್ಧತಿಯಾಗಿದ್ದು, ಕೇವಲ ಅಲ್ಪಸಂಖ್ಯಾತ ಓಲೈಕೆ, ಕ್ರೈಸ್ತ ಮತಾಂತರ ಸಂಸ್ಥೆಗಳ ಹಿಡನ್ ಅಜೆಂಡಾದ ಟೂಲ್ ಕಿಟ್ ಭಾಗವಾಗಿ ಉದಯನಿಧಿ ಬಹು ಸಂಖ್ಯಾತ ಹಿಂದೂ ದ್ವೇಷಿ ನಿಲುವು ತಾಳಿ ಓರ್ವ ಜವಾಬ್ದಾರಿ ಸಚಿವನಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಉದಯನಿಧಿ ಹೇಳಿಕೆಗೆ INDIA ಒಕ್ಕೂಟದ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ದಿವ್ಯ ಮೌನ ತಾಳುವ ಮೂಲಕ ಪರೋಕ್ಷವಾಗಿ ತಮ್ಮ ಸಹಮತ ಸೂಚಿಸಿ ಹಿಂದೂ ವಿರೋಧಿ ಹೇಳಿಕೆಗೆ ಸಮ್ಮತಿ ಸೂಚಿಸಿದೆ. ವಿಪಕ್ಷ ನಾಯಕರು ತಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಬೇಕು. ತಮಿಳುನಾಡು ಸರ್ಕಾರ ಹಿಂದೂ ವಿರೋಧಿ ಹೇಳಿಕೆ ನೀಡಿದ ಉದಯನಿಧಿಯನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications