Hubballi: ಅವಳಿನಗರದಲ್ಲಿ ಹೆಚ್ಚಾಯ್ತು ಪೊಲೀಸ್ ಬಿಗಿ ಭದ್ರತೆ, ವಿಶೇಷ ತಂಡ ರಚನೆ
ಹುಬ್ಬಳ್ಳಿ, ಜನವರಿ 17: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿವೆ. ಈ ಮಂದಿರಕ್ಕಾಗಿ ಮೂರು ದಶಕಗಳ ಹಿಂದೆ ಹೋರಾಟ ಮಾಡಿದ್ದ ಕರಸೇವಕರ ಬಂಧನ ಬೆನ್ನಲ್ಲೆ ಇದೀಗ ಹುಬ್ಬಳ್ಳಿಯಲ್ಲಿ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ.
ಹೌದು, ಹುಬ್ಬಳ್ಳಿಯಲ್ಲಿ ಹಿಂದು ಕರಸೇವಕರನ್ನು ಬಂಧಿಸಿದ್ದಕ್ಕಾಗಿ ಸಾಕಷ್ಟು ಚರ್ಚೆ, ಆರೋಪಗಳು, ಪ್ರತಿಭಟನೆಗಳು ಜರುಗಿದ್ದವು. ಇಲ್ಲ ಸಲ್ಲದೇ ಹೇಳಿಕೆ, ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೆ ರಾಮ ಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತೆ, ಜನರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ.

ಸದ್ಯ ಕರ್ನಾಟಕದಾದ್ಯಂತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಹುಬ್ಬಳ್ಳಿ ಧಾರವಾಡಅವಳಿನಗರದ ಪ್ರಮುಖ ವೃತ್ತಗಳು, ಮಾರುಕಟ್ಟೆ ಪ್ರದೇಶಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಮುಖ ಧಾರ್ಮಿಕ ಕೇಂದ್ರಗಳಿಗೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರ ಚಲನವಲನಗಳ ಮೇಲೆ ಕಟ್ಟೆಚ್ಚರ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ದಿನ ಹಾಗೂ ಅದಕ್ಕೂ ಮೊದಲು ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮೆರವಣಿಗೆಗಳು ನಡೆಯಲಿವೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಡ್ರೋನ್ ಕ್ಯಾಮೆರಾದಿಂದ ವಿಡಿಯೊ ಚಿತ್ರೀಕರಣ ಮಾಡಿ ಸಾರ್ವಜನಿಕರ ಚಲನವಲನದ ಮೇಲೆ ನಿಗಾ ಇಡಲು ತೀರ್ಮಾನಿಸಿದೆ.

ಇನ್ನೂ ಜಿಲ್ಲೆ ವ್ಯಾಪ್ತಿಯ ಧಾರ್ಮಿಕ ಸ್ಥಳ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಹೆಚ್ಚುವರಿ ಸಿಬ್ಬಂದಿ ಜೊತೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಮತ್ತು ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜಿಸಲು ಯೋಜನೆ ರೂಪಿಸಿದೆ.
ಹಳೇಹುಬ್ಬಳ್ಳಿ ಗಲಭೆ ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಕಿಡಿಗೇಡಿಗಳ ಮಾಹಿತಿ ಸಂಗ್ರಹ
ಹೊರಭಾಗಗಳಿಂದ ಬರುವ ಪ್ರವಾಸಿಗರ ಮಾಹಿತಿ, ದಾಖಲೆಗಳನ್ನು ಪಡೆದು ವಸತಿ ಗೃಹಗಳಲ್ಲಿ, ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ನೀಡಬೇಕು ಎಂದು ಹೋಟೆಲ್ ಮಾಲೀಕರಿಗೆ, ವ್ಯವಸ್ಥಾಪಕರಿಗೆ ಸೂಚಿಸಿದೆ. ಸಂಭವನೀಯ ಕಿಡಿಗೇಡಿಗಳ ಮಾಹಿತಿ ಸಂಗ್ರಹಿಸಿ ಅವರ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಬೀಟ್‌ನಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಾತ್ಮಿದಾರರನ್ನಾಗಿ ಮಾಡಿಕೊಳ್ಳಲಾಗಿದೆ.
ಸ್ವಯಂ ಪ್ರೇರಿತ ದೂರು ದಾಖಲು
ಫೋಟೊಗಳನ್ನು ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಂಚಿಕೆ ಮಾಡುವುದು, ಭಾವನೆಗಳನ್ನು ಕೆರಳಿಸುವುದು ಮಾಡಿದರೆ, ಅಂಥವರನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳುವಂತೆ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ಬೀಟ್ ಮಟ್ಟದಲ್ಲಿ ನಡೆಯುತ್ತಿರುವ ಸಭೆಯಲ್ಲೂ ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಲಾಗುತ್ತಿದೆ. ಅಗತ್ಯವಿದ್ದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಡಿಸಿಪಿ ರಾಜೀವ್ ಎಂ.ತಿಳಿಸಿದರು.
ವಿಶೇಷ ತಂಡ ರಚನೆ: 3 ಪಾಳಿಯಲ್ಲಿ ಕರ್ತವ್ಯ
ಸಾಮಾಜಿಕ ಜಾಲತಾಣಗಳ ಬಳಕೆದಾರರ ಮೇಲೆ ಕಣ್ಣಿಡಲು ವಿಶೇಷ ತಂಡ ರಚಿಸಲಾಗಿದೆ. ಮೂರು ಪಾಳಿಗಳಲ್ಲಿ ತಂಡ ಕಾರ್ಯ ನಿರ್ವಹಿಸುತ್ತಿವೆ. ಅವಳಿನಗರದ ಪ್ರತಿಯೊಬ್ಬರ ಜಾಲತಾಣಿಗರ ಖಾತೆಯ ಮೇಲೆ ವಿಶೇಷ ಗಮನ ಇಡಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ಪ್ರಚೋದನೆಗೆ ಕುಮ್ಮಕ್ಕು ನೀಡುವವರ ಹಾಗೂ ಶಾಂತಿ ಕದಡುವ ಕಿಡಿಗೇಡಿಗಳ ಮಾಹಿತಿ ಸಂಗ್ರಹಿಸಿ ಅವರ ಖಾತೆಯನ್ನು ದಿನದ ಇಪ್ಪತ್ನಾಲ್ಕು ಗಂಟೆಯೂ ಗಮನಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications