ರೈತನ ಬಾಯಿಯಲ್ಲಿ ಬೂಟು ಇಟ್ಟು ದೌರ್ಜನ್ಯ: ಪಿಎಸ್‌ಐಗೆ ಕಠಿಣ ಶಿಕ್ಷೆಗೆ ಆಗ್ರಹ
ಹುಬ್ಬಳ್ಳಿ, ಅಕ್ಟೋಬರ್ 05: ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ರೈತನೋರ್ವ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಬರುವಾಗ ಪಿಎಸ್‌ಐ ಮಣಿಕಂಠ ರೈತನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಆ ರೈತನ ಬಾಯಿಯಲ್ಲಿ ಬೂಟ್ ಹಾಕಿದ್ದು ಅಕ್ಷಮ್ಯ ಅಪರಾಧ ಆಗಿದ್ದು ತಪ್ಪು ಎಸಗಿದ ಪಿಎಸ್‌ಐಯನ್ನು ಖಾಯಂ ಸೇವೆಯಿಂದ ವಜಾ ಮಾಡಬೇಕು ಎಂದು ರತ್ನ ಭಾರತ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಹದಾಯಿ ಹೋರಾಟಗಾರ ಹೇಮನಗೌಡರ ಬಸನಗೌಡರ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಅಮಾಯಕ ರೈತನ ಮೇಲೆ ಹಲ್ಲೆ ಸರಿಯಲ್ಲ ಈಗಾಗಲೇ ಪಿಎಸ್ ಐ ಮಣಿಕಂಠ ಅವರಮ್ನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಲಾಗಿದೆ. ಬಳ್ಳಾರಿ ವಲಯದ ಐಜಿ ಲೋಕೇಶ್ ಕುಮಾರ್ ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಇಷ್ಟೇ ಶಿಕ್ಷೆ ಆಗಬಾರದು. ಮಾನವೀಯತೆ ಇಲ್ಲದ ರೈತರ ಬಗ್ಗೆ ಅಸಡ್ಡೆ ತೋರಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲು ಒತ್ತಾಯ ಮಾಡಿದರು .
ಪಿಎಸ್‌ಐ ಮಣಿಕಂಠ ಎನ್ನುವಾತ ಮಸ್ಕಿ ಪಟ್ಟಣದಲ್ಲಿ ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ಟ್ರ್ಯಾಕ್ಟರ್ ಚಾಲಕ ನಿರುಪಾದಿ ಎನ್ನುವರಿಗೆ ಮನಬಂದಂತೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಅಲ್ಲದೇ ಬಾಯಿಯಲ್ಲಿ ಬೂಟ್ ಹಾಕಿದ್ದಾರೆ ಎಂದು ನಿರುಪಾದಿ ಪತ್ನಿ ಲಕ್ಷ್ಮೀ ನೀಡಿದ್ದ ದೂರಿನ ಅನ್ವಯ ಮಸ್ಕಿ ಠಾಣೆಯಲ್ಲೇ ಎಫ್ಐಆರ್ ದಾಖಲಾಗಿದೆ.

ಅಲ್ಲದೇ ವಾಲ್ಮೀಕಿ ಸಂಘ ಹಾಗೂ ವಿವಿಧ ರೈತ ಪರ ಸಂಘಟನೆಗಳು ಮಣಿಕಂಠ ಅವರನ್ನು ಅಮಾನತು ಮಾಡುವಂತೆ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದರು . ಇದೀಗ ಈ ಪ್ರಕರಣದಲ್ಲಿ ಪಿಎಸ್‌ಐ ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಇಷ್ಟೇ ಶಿಕ್ಷೆ ಕೊಟ್ಟರೇ ಆ ಪೊಲೀಸ್ ಅಧಿಕಾರಿ ಮತ್ತೇ ಲಂಚ ಕೊಟ್ಟು ಸೇವೆಗೆ ಬರುತ್ತಾರೆ. ಆಗ ಅವರ ದೌರ್ಜನ್ಯ ಮುಂದುವರಿಯುತ್ತದೆ. ಹೀಗಾಗಿ ಈ ಶಿಕ್ಷೆ ಬೇಡ ಎಂದು ಹೇಮನಗೌಡರ ಬಸನಗೌಡರ ಹೇಳಿದ್ದು, ತಾವು ಗೃಹ ಸಚಿವರಾದ ಜಿ ಪರಮೇಶ್ವರ ಅವರಿಗೆ ಸಾಕಷ್ಟು ಸಲ ದೂರವಾಣಿ ಮೂಲಕ ಸಂಪರ್ಕ ಮಾಡಿ ಪ್ರಕರಣ ಕುರಿತು ಮಾಹಿತಿ ಕೊಡಲು ಪ್ರಯತ್ನ ಪಟ್ಟರು ಸಚಿವರು ದೂರವಾಣಿ ಕರೆ ಸ್ವೀಕಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು..?
ಸೆಪ್ಟೆಂಬರ್ 20ರಂದು ಮಸ್ಕಿ ಪಟ್ಟಣದಲ್ಲಿ ನಿರುಪಾದಿ ಎಂಬುವರು ಟ್ರ್ಯಾಕ್ಟರ್ನಲ್ಲಿ ಮರಳು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಿಎಸ್‌ಐ ಮಣಿಕಂಠ ಟ್ರ್ಯಾಕ್ಟರ್ ತಡೆದು ಮರಳು ತೆಗೆದುಕೊಂಡು ಹೋಗಲು 20ಸಾವಿರ ರೂಗೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ತನ್ನ ಜೀಪ್‌ನಲ್ಲಿದ್ದ ಪೈಪ್ ತೆಗೆದುಕೊಂಡು ನಿರುಪಾದಿ ಅವರಿಗೆ ಮನಬಂದಂತೆ ಥಳಿಸಿದ್ದರು ಎನ್ನಲಾಗಿತ್ತು. ಅಲ್ಲದೇ ಪಿಎಸ್‌ಐ ಮಣಿಕಂಠ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಹಲ್ಲೆ, ಬೆದರಿಕೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಹಾಗೂ ರೈತ ಸಂಘಟನೆಗಳು ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಂಗಸೂರು ಡಿವೈಎಸ್ಪಿ ಮಂಜುನಾಥ ಹಾಗೂ ಸಿಪಿಐ ಬಾಲಚಂದ್ರ ಲಕ್ಕಂ ಅವರಿಗೆ ಮನವಿ ಸಲ್ಲಿಸಿದ್ದವು. ಆದರೆ ಈಗ ಅಮಾನತು ಬೇಡ. ಕಠಿಣ ಶಿಕ್ಷೆ ಆಗಲಿ ಎಂದು ಹೇಮನಗೌಡರ ಬಸನಗೌಡರ ಒತ್ತಾಯ ಮಾಡಿದರು .












Click it and Unblock the Notifications