ಈದ್ಗಾ ಮೈದಾನದ ಗಣೇಶ ವಿಸರ್ಜನೆ ಹೆಸರಲ್ಲಿ ಪ್ರಚೋದನಾಕಾರಿ ಭಾಷಣ: ಪ್ರಮೋದ್ ಮುತಾಲಿಕ್ ವಿರುದ್ಧ ದೂರು
ಹುಬ್ಬಳ್ಳಿ, ಸೆಪ್ಟೆಂಬರ್, 22: ಅನ್ಯ ಧರ್ಮಗಳ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಹಿನ್ನೆಲೆ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕಲಂ 153(ಎ), 295(ಎ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಮಹಾನಗರ ಪಾಲಿಕೆ 8 ವಲಯದ ಸಹಾಯ ಆಯುಕ್ತ ಚಂದ್ರಶೇಖರಗೌಡ ಎಂಬುವವರು ದೂರು ನೀಡಿದವರಾಗಿದ್ದಾರೆ.
ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದ ಗಣೇಶ ವಿಸರ್ಜನೆಗೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ಗಣೇಶ ದರ್ಶನ ಪಡೆದುಕೊಂಡಿದ್ದರು. ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಮಾಡಲಾಗಿದೆ. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು ಎಂದು ಹೇಳಿದ್ದರು.

ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ದೇಶ ವಿಭಜನೆ ಮಾಡಿದ ದ್ರೋಹಿಗಳು. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ನಿಮ್ಮ ನಮಾಜ್‌ಗೂ ನಾವು ಅಡ್ಡಿಪಡಿಸಬೇಕಾಗುತ್ತದೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್‌ಗೆ ಅವಕಾಶ ಕೊಡದಂತೆ ಕೋರ್ಟ್‌ಗೆ ಹೋಗುತ್ತೇವೆ. ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ, ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಅಂತ ವಾಗ್ದಾಳಿ ಮಾಡಿದ್ದರು.
ಮೂರು ದಿನ ಯಾವುದೇ ಗೊಂದಲ್ಲ ಇಲ್ಲದೆ ಗಣೇಶ ಪ್ರತಿಷ್ಠಾಪನೆಯಾಗಿದೆ. ಹಿಂದೂ ಸಮಾಜ ಶಾಂತಿಯಿಂದ ಆಚರೆಣೆ ಮಾಡಿದೆ. ಸದ್ಯ ಈದ್ಗಾ ಮೈದಾನ ಶುದ್ದಿಯಾಗಿದೆ. ಗಣೇಶ ಉತ್ಸವಕ್ಕೆ ವಿರೋಧ ಮಾಡಿದವರು ದೇಶ ವಿರೋಧಿಗಳು, ಅಧರ್ಮಿಯರು. ನಾವು ಅದನ್ನು ಮೆಟ್ಟಿ ನಿಂತು ಆಚರಣೆ ಮಾಡಿದ್ದೇವೆ ಎಂದು ಹೇಳಿದ್ದರು.
ಸೆಪ್ಟೆಂಬರ್ 19ರಂದು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಕಳೆದ ವರ್ಷದಂತೆ ಈ ವರ್ಷವು ಹೋರಾಟ ಮಾಡಿದ ಬಳಿಕವೇ ಪಾಲಿಕೆ ಹಬ್ಬಕ್ಕೆ ಅನುಮತಿ ಕೊಟ್ಟಿತ್ತು. ಮೂರು ದಿನಗಳ ಕಾಲ ಕೆಲ ಷರತ್ತು ಹಾಕಿ ಪಾಲಿಕೆ ಅನುಮತಿ ಕೊಟ್ಟಿತ್ತು. ಮೂರು ದಿನಗಳ ಕಾಲ ಈದ್ಗಾ ಮೈದಾನದಲ್ಲಿ ವಿಶೇಷ ಪೂಜೆ ಹೋಮ ಹವನ ಹಮ್ಮಿಕೊಳ್ಳಲಾಗಿತ್ತು.
ನಾಡಿನ ಅನೇಕ ಜನ ಬಂದು ಈದ್ಗಾ ಮೈದಾನದ ಗಣೇಶನ ದರ್ಶನ ಪಡೆದಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆಗೆ ವಿಸರ್ಜನಾ ಮೆರವಣಿಗೆ ಆರಂಭವಾಗಿದ್ದು, ಸಂಜೆ 6 ಗಂಟೆ ವೇಳೆಗೆ ಹುಬ್ಬಳ್ಳಿಯ ಗಾಜಿನ ಮನೆಯ ಪಕ್ಕ ಇರುವ ಬಾವಿಯಲ್ಲಿ ಗಣೇಶನ ವಿಸರ್ಜನೆ ಮಾಡಲಾಗಿದೆ.












Click it and Unblock the Notifications