ಹುಬ್ಬಳ್ಳಿಯಲ್ಲಿ ಎಮ್ಮೆಯೊಂದಿಗೆ ಪ್ರತಿಭಟನೆ, ಮರ ಏರಿದ ಹೋರಾಟಗಾರ
ಹುಬ್ಬಳ್ಳಿ, ಜೂನ್ 8: ನಗರದ ಸಂಗ್ರಾಮ ಸೇನೆ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎದುರು ಎಮ್ಮೆಯೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ನಡೆಯುತ್ತಿರುವ ಕಾಮಗಾರಿಗಳಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಎರಡು ವರ್ಷಗಳಿಂದ ನಡೆಯುತ್ತಿರುವ ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಕುರಿತು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡದಿರುವ ಕ್ರಮವನ್ನು ಖಂಡಿಸಿದರು.

ಪಾಲಿಕೆ ಕಾರ್ಯವೈಖರಿ ಕುರಿತಾದ ಫಲಕಗಳನ್ನು ಎಮ್ಮೆಯ ಮೇಲೆ ಹಾಕಿಕೊಂಡು ಬಂದ ಹತ್ತಾರು ಕಾರ್ಯಕರ್ತರು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಹಲವು ವರ್ಷಗಳಿಂದ ಬಿಆರ್ ಟಿಎಸ್ ಕಾಮಗಾರಿ ನಡೆದಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದರು.
ಕಾಲಮಿತಿ ಮುಗಿದರೂ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ ನಗರದ ಎಲ್ಲ ಭಾಗಗಳಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹೇಳಿದರು.
ಇನ್ನು ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಕುರಿತು ಪಾಲಿಕೆಗೆ ಎಳ್ಳಷ್ಟೂ ಕಾಳಜಿ ಇಲ್ಲ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಕನಿಷ್ಠ ಒಂದು ಬಾರಿಯಾದರೂ ನಿರ್ಣಯ ಕೈಗೊಂಡಿಲ್ಲ ಎಂದು ಸಂಗ್ರಾಮ ಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮರ ಏರಿ ಕುಳಿತು ಪ್ರತಿಭಟನೆ
ಜೂನ್ ಹನ್ನೆರಡರಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಪಾಲಿಕೆ ಮೇಯರ್ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಆವರಣದಲ್ಲಿ ಸೇನೆಯ ಕಾರ್ಯಕರ್ತ ಬಸವಯ್ಯ ಮರ ಏರಿ ಕುಳಿತು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಮೇಯರ್ ಡಿ.ಕೆ.ಚೌವ್ಹಾಣ್ ಹಾಗೂ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅವರು ಬಸವಯ್ಯ ಅವರನ್ನು ಮರದಿಂದ ಕೆಳಗೆ ಇಳಿಯುವಂತೆ ವಿನಂತಿಸಿದರು. ಆದರೆ ಬಂದ್‌ಗೆ ಬೆಂಬಲ ಸೂಚಿಸುತ್ತೇನೆ ಎಂದು ಭರವಸೆ ನೀಡುವವರೆಗೂ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು.
ಆ ನಂತರ ಮೇಯರ್ ಅವರು ಬಂದ್‌ಗೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ ನಂತರ ಬಸವಯ್ಯ ಮರದಿಂದ ಕೆಳಗೆ ಇಳಿದರು.












Click it and Unblock the Notifications