ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದರೆ ಸಂಘರ್ಷಕ್ಕೆ ದಾರಿ: ಮುತಾಲಿಕ್ ಎಚ್ಚರಿಕೆ
ಹುಬ್ಬಳ್ಳಿ, ನವೆಂಬರ್ 6: ಯಾವುದೇ ಕಾರಣಕ್ಕೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೋರಿದ್ದು ಖಂಡನೀಯ. ಒಂದು ವೇಳೆ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷಕ್ಕೆ ದಾರಿ ಆಗುತ್ತದೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದ ಈಗ ಮತ್ತೆ ಸದ್ದು ಮಾಡುತ್ತಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಎಐಎಂಐಎ ಹಾಗೂ ಸಮತಾ ಸೈನಿಕದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಟಿಪ್ಪು ಜಯಂತಿ ಆಚರಣೆಗೂ ಅವಕಾಶ ಕೊಡಿ ಎಂದು ಹುಬ್ಬಳ್ಳಿ ಪಾಲಿಕೆ ಆಯುಕ್ತರಿಗೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಇಸ್ಲಾಂನಲ್ಲಿ ಅಲ್ಲಾ ಬಿಟ್ಟರೇ ಬೇರೆ ಯಾರನ್ನೂ ಪೂಜಿಸುವುದಿಲ್ಲ
ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ 272ನೇ ಜಯಂತಿಗೆ ಅವಕಾಶ ಕೊಡಿ ಎಂದು ಎಐಎಂಐಎಂ ಹಾಗೂ ಸಮತಾ ಸೈನಿಕದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಗಣೇಶೋತ್ಸವ ಆಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಲಾಗಿತ್ತು. ಇದೀಗ ಟಿಪ್ಪು ಜಯಂತಿಗೂ ಅವಕಾಶ ಕೊಡಿ ಎಂದಿದ್ದಾರೆ. ಹಾಗೂ ಅಭಿಮಾನಿಗಳು ಪಾಲಿಕೆ ಆವರಣದಲ್ಲಿ ಓವೈಸಿ ಪರ ಘೋಷಣೆ ಕೂಗಿದ್ದಾರೆ. ಇನ್ನು ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೋರಿದ್ದು ಖಂಡನೀಯ. ಇಸ್ಲಾಂನಲ್ಲಿ ಅಲ್ಲಾ ಬಿಟ್ಟರೇ ಬೇರೆ ಯಾರನ್ನೂ ಪೂಜಿಸುವುದಿಲ್ಲ ಎಂದು ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

ಮತಾಂಧನ ಜಯಂತಿ ಮಾಡಲು ಬಿಡುವುದಿಲ್ಲ
ಮುಸ್ಲಿಮರಲ್ಲೇ ಟಿಪ್ಪು ಜಯಂತಿ ಒಪ್ಪುತ್ತಿಲ್ಲ. ಆದರೆ ಇವರು ಕಾಂಗ್ರೆಸ್ ಕುಮ್ಮಕ್ಕಿನಿಂದ ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ಮತಾಂಧನ ಜಯಂತಿ ಆಚರಣೆ ಮಾಡಲು ನಾವು ಬಿಡುವುದಿಲ್ಲ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಆತ ಮೈಸೂರು ಹುಲಿನೂ ಅಲ್ಲ. ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೊಡಬಾರದು. ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷಕ್ಕೆ ದಾರಿ ಆಗುತ್ತದೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಸಂಘರ್ಷಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು
ಟಿಪ್ಪು ಸುಲ್ತಾನ್‌ಗೆ ಈ ಕರ್ನಾಟಕದಲ್ಲಿ ಗೌರವ ಸಲ್ಲಿಸಬಾರದು. ಆತ ಮಂದಿರಗಳನ್ನು ಒಡೆದಿದ್ದಾನೆ. ಆತ ಕನ್ನಡ ವಿರೋಧಿ, ಅಂಥವನ ಜಯಂತಿ ಬೇಡ. ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿರುವುದು ಯಾಕೆ ಎಂದು ಕೇಳುತ್ತಾರೆ. ಗಣೇಶೋತ್ಸವ ನಮ್ಮ ಧಾರ್ಮಿಕ ಆಚರಣೆ. ನಮಾಜ್ ಸಹ ಧಾರ್ಮಿಕ ಆಚರಣೆ. ಹೀಗಾಗಿ ಧಾರ್ಮಿಕ ಆಚರಣೆಗೆ ಅವಕಾಶ ಕೊಡಲಾಗಿತ್ತು. ಈಗ ಅವರು ಟಿಪ್ಪು ಜಯಂತಿ ಕೇಳಿದ್ದಾರೆ. ಒಂದು ವೇಳೆ ಪಾಲಿಕೆ ಅನುಮತಿ ಕೊಟ್ಟರೆ ನಾವು ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಶಿವಾಜಿ ಜಯಂತಿಗೂ ಈದ್ಗಾ ಮೈದಾನ ಕೇಳಬೇಕಾಗುತ್ತದೆ. ಆ ರೀತಿಯ ಸಂಘರ್ಷಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಓರ್ವ ದೇಶ ಭಕ್ತ
ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಲು ಮನವಿ ಮಾಡಲಾಗಿದೆ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಗಾರ. ಟಿಪ್ಪು ಸುಲ್ತಾನ್ ಅಭಿಮಾನಿಗಳಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಹಜರತ್ ಟಿಪ್ಪು ಸುಲ್ತಾನ್ ಓರ್ವ ದೇಶ ಭಕ್ತ ಕೂಡ ಆಗಿದ್ದರು. ಈದ್ಗಾ ಮೈದಾನದಲ್ಲಿ ಕಳೆದ ಗಣೇಶೋತ್ಸವ ಮೂರು ದಿನಗಳ ಕಾಲ ಆಚರಣೆ ಮಾಡಲಾಗಿದೆ. ಕೋಮು ಸೌಹಾರ್ದ ಕಾಪಾಡಲು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಅವಕಾಶ ಬೇಕು ಎಂದು ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಆಗ್ರಹಿಸಿದ್ದರು.












Click it and Unblock the Notifications