ಮುಸ್ಲಿಮರಿಗೆ OBC ಮೀಸಲಾತಿ ನೀಡುತ್ತಿರುವುದಕ್ಕೆ ದಾಖಲೆ ಇದೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್ 26: ರಾಜ್ಯದಲ್ಲಿ ಒಬಿಸಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಅದನ್ನು ಮುಸ್ಲಿಮರಿಗೆ ಕೊಡುತ್ತಿರುವುದು ಸತ್ಯ. ನಮ್ಮ ಬಳಿ ದಾಖಲೆ ಇದೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿ ಅವರು, ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಲೇ ನ್ಯಾಷನಲ್ ಒಬಿಸಿ ಕಮಿಷನ್ ಗೆ ಪತ್ರ ಬರೆದಿದ್ದಾರೆ. ಒಬಿಸಿ ಕಮಿಷರ್ ಸಿಎಂಗೆ ನೋಟಿಸ್ ಸಹ ಕಳಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಈಗ ಚುನಾವಣೆ ಕಾರಣದಿಂದ, ದಲಿತ ಒಬಿಸಿ ಮೀಸಲಾತಿ ಕಬಳಿಸುತ್ತಿಲ್ಲ. ಮುಸ್ಲಿಂರಿಗೆ ನೀಡುತ್ತಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.
ಸಿಎಂ ಸುಳ್ಳಿನ ಸರದಾರ: ಜೋಶಿ
ಸಿಎಂ ಸಿದ್ದರಾಮಯ್ಯ ಸುಳ್ಳಿನ ಸರದಾರರು. ಹಿಂದುಳಿದ ವರ್ಗಗಳ (ಒಬಿಸಿ) ರಾಷ್ಟ್ರೀಯ ಆಯೋಗಕ್ಕೆ ಬರೆದ ಪತ್ರದಲ್ಲಿ ಸಿಎಂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸಿಎಂ ಹಾಜರಾಗುವಂತೆ ಒಬಿಸಿ ಕಮಿಷನರ್ ನೀಡಿದ ನೋಟೀಸ್ ನನ್ನ ಬಳಿ ಇದೆ ಎಂದು ಜೋಶಿ ಹೇಳಿದರು.
ಒಬಿಸಿ ಕಮಿಷನ್ ಗೆ ಮುಖ್ಯಮಂತ್ರಿ ಪತ್ರ ಬರೆದಿಲ್ಲ ಎಂದಾದರೆ ಹಂಸರಾಜ್ ಅವರು ಈ ನೋಟೀಸ್ ಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಅತ್ಯಂತ ಅಪಾಯಕಾರಿ: ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಕಬಳಿಸಿ ತಮ್ಮ ವೋಟ್ ಬ್ಯಾಂಕ್ ಮುಸ್ಲಿಮರಿಗೆ ಕೊಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಸಹ ಹೇಳಿದೆ
ಧರ್ಮಾಧಾರಿತವಾಗಿ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನವೇ ಮುಸ್ಲಿಂರಿಗೆ ಮೀಸಲಾತಿ ವಾಪಸ್ ಕೊಡುವುದಾಗಿ ಹೇಳಿದ್ದು, ಈಗದನ್ನು ಸಾಧಿಸುತ್ತಿದ್ದಾರೆ ಎಂದರು.
ಒಕ್ಕಲಿಗರು-ಲಿಂಗಾಯತರ ಮೀಸಲಿಗೆ 'ಕೈ' ವಿರೋಧ
ಬಿಜೆಪಿ ಸರ್ಕಾರ ಇದ್ದಾಗ ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2 ಪರ್ಸೆಂಟ್ ಮೀಸಲಾತಿ ಕಲ್ಪಿಸಲು ಇದೇ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ಇದೇ ವೇಳೆ ಅವರು ಪ್ರಸ್ತಾಪಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರ ಕೈಗೆ ಚೊಂಬು ಕೊಡೋದನ್ನು ಕಾಂಗ್ರೆಸ್ ನಿಲ್ಲಿಸಲಿಲ್ಲ. ಪರಿಣಾಮ ಜನರೂ ಕಾಂಗ್ರೆಸ್ಸಿಗರ ಕೈಗೆ ಚೊಂಬು ಕೊಡುತ್ತಾ ಬಂದರು. ಚೊಂಬು ಹಿಡಿದು ಅಡ್ಡಾಡೋದು ಅಭ್ಯಾಸವಾಗಿದೆ. ಪ್ರಧಾನಿಯವರು ದೇಶದಲ್ಲಿ 14 ಕೋಟಿಗೂ ಹೆಚ್ಚು ಶೌಚಗೃಹ ನಿರ್ಮಿಸಿ ಚೊಂಬು ಹಿಡಿಯುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.
ಅಂಬೇಡ್ಕರ್ ಸೋಲಿಸಿದವರಿಗೆ ಸತ್ಕಾರ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದಲ್ಲದೆ, ಅವರ ವಿರುದ್ಧ ಗೆದ್ದವರಿಗೆ ಪದ್ಮವಿಭೂಷಣ ಕೊಟ್ಟು ಸತ್ಕರಿಸುವ ಮೂಲಕ ದಲಿತರ ಕೈಗೆ ಚೊಂಬು ಕೊಟ್ಟದ್ದು, ಇದೇ ಕಾಂಗ್ರೆಸ್‌ನವರು ಎಂದು ಜೋಶಿ ಹರಿಹಾಯ್ದರು.
ದೇಶದ 20-25 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಎರಡೇ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಅಂದರೆ ಜನರು ನಿಮ್ಮ ಕೈಗೆ ಚೊಂಬು ಕೊಟ್ಟು ಕಳುಹಿಸುತ್ತಿದ್ದಾರೆ. ಚತ್ತಿಸಗಢ, ರಾಜಸ್ಥಾನ, ಮಧ್ಯಪ್ರದೇಶ ಹೀಗೆ ಎಲ್ಲೆಡೆಯೂ ಹೀನಾಯವಾಗಿ ಸೋಲಿಸಿ ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳದಂತೆ ಜನ ನಿಮ್ಮ ಕೈಗೆ ಚೊಂಬು ಕೊಟ್ಟಿದ್ದಾರೆ ನೆನಪಿಟ್ಟುಕೊಳ್ಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.












Click it and Unblock the Notifications