ಮತಾಂಧತೆ, ಭಯೋತ್ಪಾದನೆ ವಿರುದ್ಧ ಜನರಿಗೆ 'ರಕ್ಷಣಾ ಗ್ಯಾರೆಂಟಿ' ಕೊಟ್ಟಿದ್ದು ಪ್ರಧಾನಿ ಮೋದಿ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆ ಸಹಿಸುವುದಿಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ದೇಶದಲ್ಲಿ ಕುಮ್ಮಕ್ಕು ಕೊಟ್ಟಾಗಲೆಲ್ಲ ಭಾರತದ ಸೈನಿಕರ ಮೂಲಕ ದಿಟ್ಟ ಉತ್ತರ ಕೊಡಲಾಗಿದೆ. ದೇಶದಲ್ಲಿ ಮತಾಂಧತೆ ಮತ್ತು ಭಯೋತ್ಪಾದನೆಯಿಂದ ಜೀವ ರಕ್ಷಣೆಯ ಗ್ಯಾರೆಂಟಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಬಣ್ಣಿಸಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.ಉಗ್ರರು, ಭಯೋತ್ಪಾದಕರನ್ನು ಸೆದೆಬಡಿದು ಪಾಕಿಸ್ತಾನವನ್ನು ಬಗ್ಗು ಬಡಿಯುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಭಯೋತ್ಪಾದನಾ ಘಟನೆಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಮತಾಂಧ ಶಕ್ತಿಗಳಿಂದ ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರ ಜೀವಕ್ಕೆ, ಜೀವನಕ್ಕೆ ರಕ್ಷಣೆಯ ಪ್ರಧಾನಿ ಮೋದಿ ಸರ್ಕಾರ ಗ್ಯಾರೆಂಟಿ ನೀಡಿದೆ ಎಂದರು.
ಮತೀಯ ಶಕ್ತಿಗಳಿಗೆ ಧೈರ್ಯ ಹೆಚ್ಚಾಗಿದೆ
ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ನೀತಿಯಿಂದಾಗಿ ಮತಾಂಧ, ಮತೀಯ ಶಕ್ತಿಗಳಿಗೆ ಮತ್ತೆ ಧೈರ್ಯ ಬಂದಿದೆ. ಅದರ ಪರಿಣಾಮವನ್ನು ರಾಮೇಶ್ವರ ಕೆಫೆ ಸ್ಫೋಟ, ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ, ಮತಾಂತರ ಯತ್ನ, ಯಾದಗಿರಿ ದಲಿತ ಯುವಕನ ಮೇಲೆ ಹಲ್ಲೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳ ಘಟನಾಳವಳಿಗೆ ಮೂಲಕ ನಾವೆಲ್ಲ ಕಂಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಅವರು ಆಕ್ರೋಶ ಹೊರ ಹಾಕಿದರು.

ಬೆಂಗಳೂರಿನಲ್ಲಿ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ತಮ್ಮದೇ ಪಕ್ಷದ ದಲಿತ ಶಾಸಕನ ಮನೆ ಸುಟ್ಟರೂ ಕಾಂಗ್ರೆಸ್ ಸರ್ಕಾರ 150 ಗಲಭೆಕೋರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಹುಬ್ಬಳ್ಳಿ ಪೊಲೀಸ್ ಠಾಣೆ ಧ್ವಂಸ ಪ್ರಕರಣದಲ್ಲಿ ಸಹ ಆರೋಪಿಗಳಿಗೆ ಜಾಮೀನು ನೀಡಲಾಯಿತು.
ಇನ್ನೂ ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಪೊರೇಟರ್ ಮಗಳು ನೇಹಾ ಹತ್ಯೆ ಪ್ರಕರಣದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಅಂಬೇಡ್ಕರ್ ಅವರಿಗೆ ಗೌರವ ನೀಡಿದ್ದು ಬಿಜೆಪಿ
ಸಂವಿಧಾನ ಮತ್ತು ಅದರ ರಚನೆಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅತ್ಯುನ್ನತ ಗೌರವ ನೀಡಿರುವುದೇ ಬಿಜೆಪಿ. ಮೋದಿ ಪ್ರಧಾನಿಯಾದ ಮೇಲೆ ರಾಷ್ಟ್ರದ ಗೌರವಾನ್ವಿತ ಮತ್ತು ಸಂವಿಧಾನಿಕವಾದಂತಹ ರಾಷ್ಟ್ರಪತಿ ಹುದ್ದೆಗೆ ದಲಿತ ವ್ಯಕ್ತಿ ರಾಮನಾಥ ಕೋವಿಂದ್ ಅವರನ್ನು ಅನುಮೋದಿಸಿದರು ಎಂದು ತಿಳಿಸಿದರು.
ಬಿಜೆಪಿ, ದೇಶದಲ್ಲಿ ಪ್ರವರ್ಧಮಾನಕ್ಕೆ ಬಂದಾಗಲೆಲ್ಲ ಸಂವಿಧಾನ ಬದಲಿಸುತ್ತಾರೆ, ಮೀಸಲಾತಿ ತೆಗೆಯುತ್ತಾರೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಯಾವತ್ತೂ ಹಾಗೆ ನಡೆದುಕೊಂಡಿಲ್ಲ. ಇಂತಹ ಮಾತುಗಳಿಗೆ ಜನರು ಕಿವಿಗೊಡಬಾರದು ಎಂದು ಕರೆ ನೀಡಿದರು.
ಅಂಬೇಡ್ಕರ್ ಪಂಚ ತೀರ್ಥಗಳ ಅಭಿವೃದ್ಧಿ
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಬಿಆರ್ ಅಂಬೇಡ್ಕರ್ ಅವರ ಪಂಚತೀರ್ಥ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅವರ ಹುಟ್ಟೂರು, ನಿಧನ ಸ್ಥಳ ಸೇರಿ ಐದು ಸ್ಥಳ ಅಭಿವೃದ್ಧಿಗೊಳಿಸಲಾಗಿದೆ. ಈ ಮೂಲಕ ಅಂಬೇಡ್ಕರ್ ಗೆ ಅತ್ಯಂತ ಗೌರವ ಸಮರ್ಪಿಸಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಜನರಿಗೆ ಮಾಹಿತಿ ನೀಡಿದರು.
ಮೋದಿ ಅವರ ಕಾಲದಲ್ಲಿ ಭಾರತ ಜಾಗತಿಕವಾಗಿ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇನ್ನು, ಜಗತ್ತಿನಲ್ಲಿ 3ನೇ ಬಲಿಷ್ಠ ರಾಷ್ಟ್ರವಾಗಿಸುವ ಗುರಿ ಬಿಜೆಪಿ ಹೊಂದಿದೆ ಎಂದರು.
ಪ್ರಧಾನಿಗೆ ಮಾರಿಕಾಂಬೆ ಪ್ರತಿಮೆ ನೀಡಿ ಸತ್ಕಾರ
ಇದೇ ವೇಳೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಸಚಿವ ಪ್ರಹ್ಲಾದ್ ಜೋಶಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಅಧಿದೇವತೆ ಶ್ರೀ ಮಾರಿಕಾಂಬೆ ಪ್ರತಿಮೆ ನೀಡಿ ಸತ್ಕರಿಸಿದರು.












Click it and Unblock the Notifications