ಸಿಎಂ ಸಿದ್ದರಾಮಯ್ಯ, ಡಿಸಿಎಂ ವಿರುದ್ಧ ಜಗದೀಶ್ ಶೆಟ್ಟರ್ ಕೆಂಡಾಮಂಡಲ: ಕಾರಣ ತಿಳಿಯಿರಿ
ಹುಬ್ಬಳ್ಳಿ, ಮಾರ್ಚ್ 05: ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೆಂಡಾಮಂಡಲವಾಗಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಅವರಲ್ಲಿ ದೇಶ ಭಕ್ತಿ ಇದ್ದಿದ್ದರೆ ಪಾಕ್ ಪರ ಘೋಷಣೆ ಕೂಗಿದವನ ಕಪಾಳಮೋಕ್ಷ ಮಾಡಬೇಕಿತ್ತು. ಇವರಿಗೇ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಸಿಎಂ, ಡಿಸಿಎಂ ವಿರುದ್ಧ ಅವರು ಹರಿಹಾಯ್ದರು.
ಪಾಕ್ ಪರ ಘೋಷಣೆ ಪ್ರಕರಣದಲ್ಲಿ ಮೂರು ಬಂಧನವಾಗಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ನಿಮಗೆ ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕು ಅವರು ಒತ್ತಾಯ ಮಾಡಿದರು.

ಕಾಂಗ್ರೆಸ್ ಸರ್ಕಾರ ಬಹಳ ಗೊಂದಲದಲ್ಲಿದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಆದರೂ ಹೋಗುತ್ತದೆ. ಇದೀಗ ಮೂವರು ಬಂಧನ ಬಳಿಕ ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿ ಮುಂದುವರೆಯೋಕೆ ನೈತಿಕತೆ ಉಳಿದಿಲ್ಲ ತಕ್ಷಣವೇ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನಾಸೀರ್ ಹುಸೇನ್ ಪ್ರಮಾಣ ವಚನ ಸ್ವೀಕರಿಸುವಂತಿಲ್ಲ
ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಮೇಲೂ ದೂರು ದಾಖಲಿಸಬೇಕು. ಅವರ ಹಿಂಬಾಲಕರು ಮಾಡಿರುವ ಈ ಪಾಕ್ ಪರ ಘೋಷಣೆಯ ಘಟನೆಯಲ್ಲಿ ಹುಸೇನ್ ಪಾತ್ರವು ಇದರಲ್ಲಿದೆ. ಇದು ದೇಶದ್ರೋಹದ ಘಟನೆ. ಪಾಕ್ ಪರ ಘೋಷಣೆ ಹಾಕಿದ್ದು, ನಾಸೀರ್ ಹುಸೇನ್ ಬೆಂಬಲಿಗರು. ಈ ಎಲ್ಲ ಕೇಸ್ ಮುಗಿಯೋವರೆಗೂ ಪ್ರಮಾಣ ವಚನ ಸ್ವೀಕಾರ ಮಾಡಬಾರದು .ಕಾನೂನು ಪ್ರಕಾರ ಪ್ರಮಾಣ ವಚನ ಸ್ವೀಕಾರ ಮಾಡಲು ಬರುವುದಿಲ್ಲ ಎಂದು ಅವರು ವಿವರಿಸಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಕ್ಷೀಣಿಸುತ್ತಿದೆ. ಅನೇಕ ಕಡೆಗಳಲ್ಲಿ ಕಾಂಗ್ರೆಸ್ ನಾಯಕರು, ಮುಖಂಡರು ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಕಾಂಗ್ರೆಸ್ ಆಸ್ತಿತ್ವ ಕಳೆದುಕೊಳ್ಳಲಿದೆ. ಇದು ಹೀಗೆ ಮುಂದುವರಿದರೆ, ಕಾಂಗ್ರೆಸ್ ಅದಃಪತನವಾಗಲಿದೆ ಎಂದು ಶೆಟ್ಟರ್ ಭವಿಷ್ಯ ನುಡಿದರು.

ಸಂಖ್ಯಾತರ ತುಷ್ಟೀಕರಣದಿಂದ ಸರ್ಕಾರ ಪತನ
ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡುತ್ತಾ ಸಾಗಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಬಹುದು. ಕಾಂಗ್ರೆಸ್ ನಲ್ಲಿ ಬಹಳ ಜನ ಅಸಮಾಧಾನಿತ ಶಾಸಕರಿದ್ದಾರೆ ಅಕಸ್ಮಾತ್ ಫ್ಲಡ್ ಗೇಟ್ ಓಪನ್ ಆದ್ರೆ ಸರ್ಕಾರ ಪತನ ಆಗಬಹುದು. ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ರೆಕಾರ್ಡ್ ಆಗಿದೆ. ಅಕಸ್ಮಾತ್ ನಾಸಿರ್ ಹುಸೇನ್ ಗೆ ದೇಶ ಭಕ್ತಿ ಇದ್ರೆ ಅವತ್ತೆ ಅವರನ್ನು ಕಪಾಳಕ್ಕೆ ಹೊಡೆಯಬೇಕಿತ್ತು. ಇದನ್ನು ಬಿಟ್ಟು ಬಹುತೇಕ ಕಾಂಗ್ರೆಸ್ ನಾಯಕರು ಘೋಷಣೆ ಕೂಗಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಪಾಕ್ ಪರ ಘೋಷಣೆ ಘಟನೆಯನ್ನು ಯಾರೊಬ್ಬರು ಖಂಡಿಸಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಖಂಡಿಸಿಲ್ಲ. ಕಾನೂನು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಘೋಷಣೆ ಕೂಗಿಲ್ಲ ಇದು ಬಿಜೆಪಿಯ ಕೈವಾಡ ಎಂದೆಲ್ಲ ಹೇಳಿದ್ದಾರೆ. ಇದೆಲ್ಲ ನೋಡಿದರೆ ಅಲ್ಪ ಸಂಖ್ಯಾತರ ತುಷ್ಟೀಕರಣ ಕಾಣತ್ತದೆ ಎಂದು ಕಿಡಿ ಕಾರಿದರು.












Click it and Unblock the Notifications