ಕರ್ನಾಟಕ ಬಂದ್‌ಗೆ ವಿಪಕ್ಷಗಳ ಬೆಂಬಲ-ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಸೆಪ್ಟೆಂಬರ್ 28: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್‌ಗೆ ಸಂಘಟನೆಗಳ ಜೊತೆಗೆ ವಿಪಕ್ಷದ ಬೆಂಬಲವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ಸಾವಿರ ಕ್ಯೂಸೆಕ್ ಆದೇಶ ಬಂದಾಗ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ್ದರೆ. ಅಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ ಎಂದರು.

ಈಗ 3 ಸಾವಿರ ಕ್ಯೂಸೆಕ್ ಆದೇಶ ಬಂದಿದ್ದು, ತಡವಾಗಿಯಾದರೂ ಸರ್ಕಾರಕ್ಕೆ ಬುದ್ಧಿ ಬಂದಿದೆ, ಜನ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದಿದೆ. ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಾಕಷ್ಟು ನೀರು ಹರಿದು ಹೋಗಿದೆ ತಮಿಳುನಾಡು ಟ್ರಿಬ್ಯುನಲ್ ಆದೇಶವನ್ನು ಉಲ್ಲಂಘನೆ ಮಾಡಿದೆ. ಕುಡಿಯುವ ನೀರಿಗೆ ಬಹುದೊಡ್ಡ ಹಾಹಾಕಾರ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ಹೇಳಿದರು.
ಕೃಷ್ಣೆಯ ಹಿತರಕ್ಷಣೆಗೂ ಸರ್ಕಾರ ಮುಂದಾಗಬೇಕು
ಕಾವೇರಿ ಅಷ್ಟೇ ಅಲ್ಲ ಕೃಷ್ಣೆಯ ಹಿತರಕ್ಷಣೆಗೂ ಸರ್ಕಾರ ಮುಂದಾಗಬೇಕು. ಈ ವಿಚಾರದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಒಂದು ವೇಳೆ ಸರ್ಕಾರ ಎಡವಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ನಾಳಿನ ಬಂದ್‌ಗೆ ಸಂಘಟನೆಗಳ ಜೊತೆಗೆ ವಿಪಕ್ಷದ ಬೆಂಬಲವೂ ಇದೆ. ಕಾವೇರಿಗಾಗಿ ಎಲ್ಲಿಯವರೆಗೂ ಹೋರಾಟ ಇರುತ್ತದೆಯೋ, ಅಲ್ಲಿಯವರೆಗೂ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಗಾಲ ಇದೆ. ಈಗಾಗಲೇ ಮುಂಗಾರು ಮುಗಿದಿದೆ. ರೈತರು ಕಂಗಾಲಾಗಿದ್ದಾರೆ. ಆದರೆ ಬೆಳೆ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಹಿಂದೆ ಪ್ರವಾಹ ಬಂದಾಗ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಬಹುತೇಕ ಸಂದರ್ಭಗಳಲ್ಲಿ ರಾಜ್ಯದ ರೈತರಿಗೆ ನಾವು ಪರಿಹಾರ ಒದಗಿಸಿದ್ದೇವೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದರು.
ಮಾಜಿ ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದ್ದು, ಹೀಗಾಗಿ ಮತ್ತೆ ಆಪರೇಶನ್ ಗೆ ಕಾಂಗ್ರೆಸ್ ಮುಂದಾಗಿದೆ ಇದು ಕಾಂಗ್ರೆಸ್‌ನ ವೀಕ್ ನೆಸ್. ಕೆಲವರು ಟಿಕೆಟ್ ಸಿಗದೇ ಇದ್ದವರು ಕಾಂಗ್ರೆಸ್‌ಗೆ ಹೋಗುತ್ತಾರೆ. ಅದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ. ಟಿಕೆಟ್ ಸಿಗದೇ ಇದ್ದವರು ಹೋಗೋದು ಸಹಜ. ಅದರ ಬಗ್ಗೆ ನಾವೇನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್‌ನ ಈ ಆಪರೇಶನ್‌ನಿಂದ ರಾಜಕೀಯವಾಗಿ ಯಾವುದೇ ಲಾಭವಾಗುವುದಿಲ್ಲ ಎಂದರು.












Click it and Unblock the Notifications