ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಹುಬ್ಬಳ್ಳಿ, ಡಿಸೆಂಬರ್ 27: ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟಿದ್ದಾರೆ. ರಾಜು ಮೂಗೇರಿ (16) ಮೃತ ದುರ್ದೈವಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 22ರಂದು ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಿಕಾರಿಗಳು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ 9 ಜನರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಈವರೆಗೂ ಮೂವರು ಮೃತಪಟ್ಟಿದ್ದು, ಆರು ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ರಾಜ್ಯ ಸರ್ಕಾರದ ನೆರವಿನಿಂದ ಬೆಂಗಳೂರಿನಿಂದ ತಜ್ಞ ವೈದ್ಯರ ತಂಡ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ನಿನ್ನೆ ಗುರುವಾರ (ಡಿಸೆಂಬರ್ 26) ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದರು. ಈ ನೋವಿನ ಬೆನ್ನಲ್ಲೇ ಇಂದು (ಡಿಸೆಂಬರ್ 27) ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವಿಗೀಡಾಗಿದ್ದಾರೆ.
ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ರಾಜು ಮೂಗೇರಿ ಮೃತರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಚ್ಚವ್ವನ ಕಾಲೋನಿಯ ಸನ್ನಿಧಿಯಲ್ಲಿ ಒಟ್ಟು 14 ಜನ ಮಾಲೆ ಧರಿಸಿದ್ದರು. ಅಂದು ಮೇಲಿನ ಕೋಣೆಯಲ್ಲಿ 9 ಜನ ಮಲಗಿದ್ದರು, ಕೆಳಗೆ 5 ಜನ ಇದ್ದರು. ಈ ಘಟನೆ ಬಳಿಕ ನೊಂದ ಉಳಿದ ಐವರು ಕೂಡ ಈಗ ಮಾಲೆಯನ್ನು ತೆಗೆದಿದ್ದಾರೆ. ಇನ್ನು ಗಾಯಾಳುಗಳ ಪೈಕಿ ವಿನಾಯಕ ಬಾತಕೇರ(12), ಪ್ರಕಾಶ ಬಾರಕೇರ(42), ಮಂಜು ತೋರದ(22), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ (26) ಮತ್ತು ಶಂಕರ ರಾಯನಗೌಡ್ರ(29)ಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications