NWKRTC: ಪ್ರಯಾಣಿಕ ಮರೆತಿದ್ದ ವಸ್ತು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಡ್ರೈವರ್
ಹುಬ್ಬಳ್ಳಿ, ಡಿಸೆಂಬರ್ 16: ಪ್ರಯಾಣಿಕರು ಬಸ್, ಆಟೋಗಳಲ್ಲಿ ದುಬಾರಿ ಮೌಲ್ಯದ ಚಿನ್ನಾಭರಣ, ದಾಖಲಾತಿ, ನಗದು ಹಣ, ಇನ್ನಿತರ ವಸ್ತುಗಳನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಅನೇಕ ಚಾಲಕರು ಇದ್ದಾರೆ. ಅಂತದ್ದೆ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ (NWKRTC) ಬಸ್ ಚಾಲಕರೊಬ್ಬರು ದುಬಾರಿ ವಸ್ತುವನ್ನು ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.
ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್ ಫೋನ್ ಅನ್ನು ವಾಯುವ್ಯ ಸಾರಿಗೆ ಬಸ್ ಚಾಲಕ ಹಿಂದಿರುಗಿಸಿದ್ದಾರೆ. ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ನಿವಾಸಿ ಎಸ್.ಜೆ.ಆರ್. ಪಿ.ಯು. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಹುಬ್ಬಳ್ಳಿಯ ನವನಗರದ ಪಂಚಾಕ್ಷರಿ ನಗರದ ನಿವಾಸಿಯಾಗಿರುವ ಎಸ್. ಬಿ. ಕರೆಪ್ಪಗೌಡ್ರ ಎಂಬುವವರು ಡಿಸೆಂಬರ್ 15ರಂದು ಮೊಬೈಲ್ ಬಿಟ್ಟು ಹೊಗಿದ್ದಾರೆ.
ರವಿವಾರ (ಡಿಸೆಂಬರ್ 15) ಬನಶಂಕರಿ ದೇವರ ದರ್ಶನಕ್ಕೆಂದು ತೆರಳುವಾಗ ಕಲಘಟಗಿ ಡಿಪೋಕ್ಕೆ ಸೇರಿದ ಹುಬ್ಬಳ್ಳಿ - ಇಲಕಲ್ ಮಾರ್ಗದ ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಬಾದಾಮಿ ವರೆಗೆ ಪ್ರಯಾಣ ಮಾಡಿದ್ದಾರೆ. ಬದಾಮಿಯಲ್ಲಿ ಇಳಿಯುವಾಗ ತಮ್ಮ ದುಬಾರಿ ಬೆಲೆಯ ಮೊಬೈಲ್ ಫೋನ್ ಅನ್ನು ಬಸ್‌ನಲ್ಲಿ ಬಿಟ್ಟು ಹೋಗಿದ್ದರು.
ದೇವಸ್ಥಾನದಲ್ಲಿ ಬನಶಂಕರಿ ದೇವರ ದರ್ಶನದ ನಂತರ ಫೋನ್ ಬಿಟ್ಟು ಬಂದದ್ದು ನೆನಪಾಗಿದೆ. ಆಧಾರ್ ಕಾರ್ಡ್, ವೈಯಕ್ತಿಕ ಮಾಹಿತಿ, ಹಲವಾರು ಪೋನ್ ಸಂಖ್ಯೆಗಳು ಮತ್ತಿತರ ಪ್ರಮುಖ ದಾಖಲೆಗಳಿದ್ದ ಸುಮಾರು 15 ಸಾವಿರ ಬೆಲೆಯ ಮೊಬೈಲ್ ಫೋನ್ ಕಳೆದು ಹೋಗಿದ್ದರಿಂದ ಗಾಬರಿಯಾಗಿದ್ದಾರೆ. ಕೂಡಲೇ ತಮ್ಮ ಫೋನ್ ಗೆ ಕರೆ ಮಾಡಿದ್ದಾರೆ. ಬಸ್ ಚಾಲಕನಾದ ದೊಡ್ಡನಗೌಡ ಗೌಡರ ರವರ ಬಳಿ ತಮ್ಮ ಮೊಬೈಲ್ ಸುರಕ್ಷಿತವಾಗಿರುವುದು ಗೊತ್ತಾಗಿದೆ.
ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ನಿರ್ವಾಹಕರ ಮೂಲಕ ಮೊಬೈಲ್ ಅನ್ನು ಸೋಮವಾರ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಮೊಬೈಲ್ ಮರಳಿ ಪಡೆದ ಪ್ರಯಾಣಿಕರಾದ ಎಸ್. ಬಿ. ಕರೆಪ್ಪಗೌಡ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಪಡೆದು ಕೃತಜ್ಞತೆ ತಿಳಿಸಿದ ಮಾಲೀಕ
ಈ ನನ್ನ ಮೊಬೈಲ್‌ನಲ್ಲಿ ಪ್ರಮುಖ ದಾಖಲೆಗಳು ಇದ್ದವು. ಸಾವಿರಾರು ರೂಪಾಯಿ ಬೆಲೆಯ ಮೊಬೈಲ್ ಕಳೆದು ಹೋಗಿದೆಯೆಂದು ತುಂಬಾ ಗಾಬರಿಯಾಗಿತ್ತು. ಮೊಬೈಲ್ ಹಿಂದಿರುಗಿ ಸಿಕ್ಕಿದ್ದು ಖುಷಿ ತಂದಿದೆ. ಚಾಲಕರಾದ ದೊಡ್ಡಪ್ಪಗೌಡ ರವರ ಪ್ರಾಮಾಣಿಕತೆಗೆ ಹಾಗೂ ಅಧಿಕಾರಿಗಳಿಗೆ ಕರೆಪ್ಪಗೌಡ್ ಅವರು ಕೃತಜ್ಞತೆ ತಿಳಿಸಿದ್ದಾರೆ.
ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಪ್ರತಿಕ್ರಿಯಿಸಿದ್ದು, ಚಾಲಕರಾದ ದೊಡ್ಡಪ್ಪಗೌಡ ರವರ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಪ್ರಯಾಣಿಕ ಸ್ನೇಹಿ ವರ್ತನೆ ಇತರೆ ನೌಕರರಿಗೆ ಮಾದರಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications