ಅಂತ್ಯಕ್ರಿಯೆ ವೇಳೆ ಉಸಿರಾಡಿದ ಮಗು: ಅಷ್ಟಕ್ಕೂ ನಡೆದಿದ್ದೇನು..? ಕಿಮ್ಸ್ ಅಧಿಕಾರಿಗಳು ಹೇಳಿದ್ದೇನು..?
ಹುಬ್ಬಳ್ಳಿ, ಆಗಸ್ಟ್ 18: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದ್ದಾನೆ ಎಂದು ನಾವು ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ಮಗು ಜೀವಂತ ಇರುವಾಗಲೇ ಡಿಸ್ಚಾರ್ಜ್ ಮಾಡಿಸಿಕೊಂಡು ಮಗುವಿನ ಸಂಬಂಧಿಕರು ಹೋಗಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ ತಿಳಿಸಿದ್ದಾರೆ.
ಬಾಲಕ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡಲು ಹೋದ ಸಂದರ್ಭದಲ್ಲಿ ಜೀವಂತವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ಕಳೆದ ಎಂಟತ್ತು ದಿನದ ಹಿಂದೆ ಮಗುವಿಗೆ ಮೆದುಳಿನಲ್ಲಿ ನೀರು ತುಂಬಿಕೊಂಡು ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ನಮಲ್ಲಿ ಬಂದಿದ್ದರು. ನಮ್ಮ ವೈದ್ಯರು ಮೆದುಳು ಜ್ವರದ ಕಾರಣದಿಂದ ಚಿಕಿತ್ಸೆ ನೀಡಿದ್ದಾರೆ.

ಆದರೆ ಬಾಲಕನ ಸಂಬಂಧಿಗಳು ಏಕಾಏಕಿಯಾಗಿ ಮಗು ಜೀವಂತ ಇರುವಾಗಲೇ ಡಿಸ್ಚಾರ್ಜ್ ಮಾಡಿಕೊಂಡು ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಗ್ರಾಮಸ್ಥರು ಮಗು ಬದುಕಿದೆ. ಯಾಕೆ ಕರೆದುಕೊಂಡು ಬಂದಿರಿ ಎಂದಾಗ ನವಲಗುಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮತ್ತೆ ತಡರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಮಗುವಿನ ಸ್ಥಿತಿಯ ಬಗ್ಗೆ ಏನು ಹೇಳಲು ಆಗುತ್ತಿಲ್ಲ ಎಂದರು.
ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಗು, ಸ್ಮಶಾನಕ್ಕೆ ಹೋಗುವ ವೇಳೆಗೆ ಜೀವಂತವಾಗಿ ಎದ್ದುಕೂತಿದೆ ಎಂಬ ವಂದತಿ ಈಗ ಹೊಸ ತಿರುವು ಪಡೆದಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಮಗುವನ್ನು ಮರಳಿ ತೆಗೆದುಕೊಂಡು ಹೋಗಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂಟರತಾಣಿ ಹೇಳಿದ್ದಾರೆ. ಇದರಲ್ಲಿ ಯಾವುದೇ ವೈದ್ಯರ ನಿರ್ಲಕ್ಷ್ಯ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರದ ಒಂದೂವರೆ ವರ್ಷದ ಮಗು ಆಕಾಶ್ ಬಸವರಾಜ್ ಪೂಜಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಬಳಿಕ ಮಗು ಸ್ಮಶಾನದಲ್ಲಿ ಉಸಿರಾಡತೊಡಗಿದೆ. ಪವಾಡ ಸದೃಷವಾಗಿ ಬಾಲಕ ಬದುಕುಳಿದಿದ್ದಾನೆ ಎಂಬ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಆಕಾಶ್ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಗದಗ ಹಾಗೂ ಧಾರವಾಡ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಗುವನ್ನು ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ನಿನ್ನೆ ಗುರುವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ಅಂತಿಮ ವಿಧಿವಿಧಾನದ ಕಾರ್ಯದಲ್ಲಿ ನೀರು ಹಾಕುವ ವೇಳೆ ಉಸಿರಾಡತೊಡಗಿತ್ತು. ಮಗು ಬದುಕುಳಿದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಮತ್ತೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ತಂದೆ ಮಾಧ್ಯಮಗಳಿಗೆ ದಾರಿ ತಪ್ಪಿಸಿದ್ದು ಇಷ್ಟೊಂದು ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications