ಕಾಂಗ್ರೆಸ್‌ಗೆ ತಾಕತ್ ಇರುವುದಕ್ಕೆ ಐದು ಗ್ಯಾರಂಟಿ ಅನುಷ್ಠಾನ ಮಾಡಿದೆ-ಶಾಸಕ ಕೋನರೆಡ್ಡಿ
ಹುಬ್ಬಳ್ಳಿ, ಜೂನ್ 6: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಅನುಷ್ಠಾನ ದೇಶದಲ್ಲಿಯೇ ಐತಿಹಾಸಿಕ ನಿರ್ಣಯ. ಐದು ಗ್ಯಾರಂಟಿಯನ್ನು ಒಟ್ಟಿಗೆ ಜಾರಿಗೆ ಮಾಡುವ ನಿರ್ಧಾರ ತೆಗೆದುಕೊಳ್ಳಲು ತಾಕತ್ ಬೇಕು ಎಂದು ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಾಸಕ ಎನ್.ಹೆಚ್.ಕೊನರೆಡ್ಡಿ ಕಾಂಗ್ರೆಸ್ ಸರ್ಕಾರವನ್ನು ಕೊಂಡಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ಗ್ಯಾರಂಟಿಯನ್ನು ಒಟ್ಟಿಗೆ ಜಾರಿಗೆ ಮಾಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿದ್ದಾರೆ. ಜನ ಸಾಮಾನ್ಯರು ಯಾರು ಕೂಡಾ ಕಾಂಗ್ರೆಸ್ ನೀಡಿದ ಗ್ಯಾರಂಟಿ ಜಾರಿಗೆ ಕುರಿತಾಗಿ ಅನುಮಾನ ಪಡುವುದು ಬೇಡ ಎಂದು ತಿಳಿಸಿದರು.

ಈ ಮೊದಲೇ ನಮ್ಮ ಕೇಂದ್ರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 100ಕ್ಕೆ 100ರಷ್ಟು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಅದರಂತೆ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡು ಐದು ಗ್ಯಾರಂಟಿ ಒಟ್ಟಿಗೆ ಜಾರಿ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದ ಜನರು ಗ್ಯಾರಂಟಿ ಕುರಿತಾಗಿ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಎಲ್ಲ ವ್ಯವಸ್ಥಿತವಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯ ಮಾಡಲಾಗುವುದು. ಜೂನ್ 11 ರಂದು ಮಹಿಳೆಯರಿಗೆ ಉಚಿತವಾಗಿ ಓಡಾಡಲು ಉಚಿತ ಬಸ್ಸಿನ ಯೋಜನೆ ಜಾರಿಯಾಗುತ್ತದೆ. ಅಂದು ನಾನು ಸಹ ಬಸ್ಸಿನಲ್ಲಿ ಪ್ರಯಾಣಿಸಿ ಮಹಿಳೆಯ ಪ್ರಯಾಣಕ್ಕೆ ಪ್ರೋತ್ಸಾಹ ನೀಡುತ್ತೇನೆ. ಜೊತೆಗೆ ಈಗಾಗಲೇ ಉಚಿತ ಅಕ್ಕಿ, ಯುವಕ-ಯುವತಿಗೆ 1,500-3,000 ರೂಪಾಯಿ ಕೊಡುವುದು ಸೇರಿದಂತೆ ಎಲ್ಲವನ್ನೂ ಯಾವುದೇ ಗೊಂದಲವಿಲ್ಲದೆ ಅನುಷ್ಠಾನ ಮಾಡಲಾಗುವುದು ಎಂದರು.

ಕೇಂದ್ರದ ಬೆಲೆ ಏರಿಕೆ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಈವರೆಗೆ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲಿಲ್ಲ. ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲಿಲ್ಲ. ರೈತರಿಗೆ ಬೆಳೆ ವಿಮೆ ಕೊಡಲಿಲ್ಲ. ಇಂತಹ ಗಂಭೀರ ವಿಷಯಗಳ ಕುರಿತಾಗಿ ಇಂದು ಕೆಡಿಸಿ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.












Click it and Unblock the Notifications