ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ರಾಜ್ಯ ಶಾಸಕರು, ಸಚಿವರನ್ನು ಆಹ್ವಾನಿಸುತಿಲ್ಲ-ಕೋನರೆಡ್ಡಿ
ಹುಬ್ಬಳ್ಳಿ, ಆಗಸ್ಟ್ 16: ಯಾವುದೇ ಕೇಂದ್ರ ಸರ್ಕಾರಿ ಕಾರ್ಯಕ್ರಮಗಳಿಗೆ ಶಾಸಕರನ್ನು ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಆಹ್ವಾನಿಸುತ್ತಿಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್ ಕೋನರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಧಾರವಾಡದಲ್ಲಿ ಬುಧವಾರ ಗೃಹಜ್ಯೋತಿ ಕಾರ್ಯಕ್ರಮ ಉದ್ಘಾಟನೆ ವೇಳೆ ಮಾತನಾಡಿದ ಅವರು, ಧಾರವಾಡದಲ್ಲಿ ಇಂದು ನಡೆದ ಗೃಹಜ್ಯೋತಿ ಕಾರ್ಯಕ್ರಮಕ್ಕೆ ನಾವು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಣ್ಣ ತಮ್ಮಂದಿರು ಇದ್ದಂತೆ ರಾಜ್ಯದ ಕಾರ್ಯಕ್ರಮಗಳಿಗೆ ಕೇಂದ್ರದವರನ್ನು ಕರೆಯುತ್ತೇವೆ . ಕೇಂದ್ರದ ಎಲ್ಲ ಜನಪ್ರತಿನಿಧಿಗಳನ್ನು ಕರೆಯುತ್ತೇವೆ. ಆದರೆ ಕೇಂದ್ರ ಸರ್ಕಾರದ ಯಾವುದೇ ಯೋಜನೆ ಲೋಕಾರ್ಪಣೆ ಹಾಗೂ ಉದ್ಘಾಟನೆಗೆ ನಮ್ಮನ್ನು ಆಹ್ವಾನಿಸಲ್ಲ ಎಂದರು.

ಕೇಂದ್ರ ಸರ್ಕಾರ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯ ಆಗಿದೆ. ಕಳೆದ ವಾರ ಧಾರವಾಡ ಜಿಲ್ಲೆಯ ಟಳ್ನಾವರದಲ್ಲಿ ಅಮೃತ ರೈಲ್ವೆ ನಿಲ್ದಾಣ ಶಂಕುಸ್ಥಾಪನೆ ನಡೆದಿದೆ. ಅದು ಕೇಂದ್ರ ಸರ್ಕಾರದ ಕಾರ್ಯಕ್ರಮ ಕಾರ್ಯಕ್ರಮ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು ಆದರೆ ರಾಜ್ಯದ ಸಚಿವರು, ಶಾಸಕರನ್ನು ಸರಿಯಾಗಿ ಕರೆಯಲಿಲ್ಲ. ಈ ಕಾರಣದ ಬಗ್ಗೆ ಪರಿಶೀಲನೆ ಆಗಬೇಕು. ಇನ್ನು ಕೇಂದ್ರದ ಕಾರ್ಯಕ್ರಮಗಳಲ್ಲಿ ಸರಿಯಾದ ಶಿಷ್ಟಾಚಾರ ಪಾಲನೆಯಾಗಬೇಕು ಈ ಸಂಬಂಧ ಕಟ್ಟುನಿಟ್ಟಿನ ಕಾನೂನು ಮಾಡಬೇಕು ಎಂದು ಆಗ್ರಹಿಸಿದರು.
ವಂದೇ ಭಾರತ್ ರೈಲು ಲೋಕಾರ್ಪಣೆಗೆ ಶಾಸಕರಿಗೆ ಆಹ್ವಾನ ಇಲ್ಲ
ಧಾರವಾಡದಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ವಂದೇ ಭಾರತ್ ರೈಲ್ವೆ ಲೋಕಾರ್ಪಣೆ ಸಂದರ್ಭದಲ್ಲಿ ಸಹ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಯಾವುದೇ ಶಾಸಕರಿಗೂ ಆಹ್ವಾನ ಕೊಟ್ಟಿರಲಿಲ್ಲ. ಈ ವೇಳೆ ಸಹ ರಾಜ್ಯ ಸರ್ಕಾರವನ್ನೇ ಗುರಿಯಾಗಿಸಿಕೊಂಡು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದ್ದರು.

ನಮ್ಮ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಯಾವುದೇ ಆಶ್ವಾಸನೆ ಕೊಡುವುದಿಲ್ಲ. ನಾವು ಕೆಲಸ ಮಾಡಿ ತೋರಿಸುವವರು. ಧಾರವಾಡದಿಂದ ವಂದೇ ಭಾರತ ರೈಲು ಆರಂಭ ಆಗಬೇಕೆಂಬ ಬೇಡಿಕೆ ಇತ್ತು. ಬಹಳ ದಿನಗಳ ಬೇಡಿಕೆಯಂತೆ ಧಾರವಾಡದಿಂದ ಆರಂಭ ಮಾಡಲಾಗಿದೆ . ಹುಬ್ಬಳ್ಳಿಯಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಈ ರೈಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಟ್ರೈನ್, ಸ್ವದೇಶಿ ನಿರ್ಮಾಣ ಟ್ರೈನ್ ಆಗಿದ್ದು, ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲು ಓಡಿಸುವ ಗುರಿ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications