National Youth Festival in Hubballi; ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾದ ವಿಶೇಷ ಉಡುಗೊರೆಗಳು
ಧಾರವಾಡ, ಜನವರಿ, 11: ಅವಳಿ ನಗರದಲ್ಲಿ ಜನವರಿ 12 ರಿಂದ 16ರ ವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಪ್ರಧಾನಿ ಅವರಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಯಾಗಿ ನೀಡಿ ಗೌರವಿಸಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಸಂಜೆ 4 ಗಂಟೆಗೆ ಯುವಜನೋತ್ಸವವನ್ನು ಉದ್ಘಾಟಿಸಲಿರುವ ಗೌರವಾನ್ವಿತ ಪ್ರಧಾನಮಂತ್ರಿ ಅವರನ್ನು ಜಿಲ್ಲಾಡಳಿತದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಗುತ್ತಿದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನವೂ ಸಹ ಆಗಿರುವುದರಿಂದ ಅವರ ಸ್ಮರಣಾರ್ಥ ಬೀದರ್ ಜಿಲ್ಲೆಯ ಖ್ಯಾತಿಯನ್ನು ಜಗತ್‌ಪ್ರಸಿದ್ಧವಾಗಿಸಿದ ಬಿದರಿ ಕಲೆಯಲ್ಲಿ ನಿರ್ಮಿಸಿದ ಸುಂದರ ಮೂರ್ತಿಯನ್ನು ನೀಡಲಾಗುತ್ತಿದೆ.
ಮೋದಿಗಾಗಿ ತಯಾರಿಸಿದ ಉಡುಗೊರೆಗಳು
ಹಾವೇರಿ ಜಿಲ್ಲೆ ಏಲಕ್ಕಿ ಬೆಳೆಯಲು ಪ್ರಸಿದ್ಧಿ ಪಡೆದಿದ್ದು, ಹಾವೇರಿಯಲ್ಲಿ ವಿಶೇಷವಾಗಿ ಏಲಕ್ಕಿ ಹಾರವನ್ನು ಸಿದ್ಧಪಡಿಸಲಾಗಿದೆ. ಏಲಕ್ಕಿ ಪೇಟ್ ಹೊಂದಿರುವ ಇದು ಏಲಕ್ಕಿಯ ಸುವಾಸನೆಯನ್ನು ಬೀರುತ್ತದೆ. ಧಾರವಾಡದಲ್ಲಿ ಪ್ರಧಾನಿ ಅವರಿಗೆ ಹೊದಿಸಲೆಂದೇ ವಿಶೇಷವಾಗಿ ನೇಯಲಾದ ಕಸೂತಿ ಕಲೆ ಹೊಂದಿರುವ ಹಾಂಡ್ ಲೂಮ್ ಶಾಲು ಮತ್ತು ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ಧ್ವಜವನ್ನು, ಟೀಕ್ ವುಡ್‌ನಲ್ಲಿ ಧ್ವಜಕ್ಕೆ ಚೌಕಟ್ಟು ಹಾಕಿರುವ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಗುತ್ತಿದೆ.

ಸಂಚಾರ ಮಾರ್ಗ ಬದಲಾವಣೆಯ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸುವ ಹಿನ್ನೆಲೆಯಲ್ಲಿ ವಾಹನ ನಿಲುಗಡೆ ಸ್ಥಳ ಹಾಗೂ ಸಂಚಾರ ಮಾರ್ಗ ಬದಲಾವಣೆಯ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ನವಲಗುಂದದಿಂದ ಬರುವವರು ಕೆ.ಎಚ್. ಪಾಟೀಲ್ ರಸ್ತೆ ಮತ್ತು ಶೃಂಗಾರ್ ಕ್ರಾಸ್‌ನಲ್ಲಿ ಇಳಿಯಬೇಕು. ಗದಗ ರಸ್ತೆ ಅಥವಾ ವಿನೋಭಾನಗರದಲ್ಲಿ ವಾಹನ ನಿಲುಗಡೆ ಮಾಡಬಹುದು. ಗದಗ ರಸ್ತೆಯಿಂದ ಬರುವ ಬಸ್‌ಗಳು ಅಂಬೇಡ್ಕರ್ ವೃತ್ತದಲ್ಲಿ ಜನರನ್ನು ಇಳಿಸಿ ಚಿಲ್ಲಿ ಮೈದಾನದಲ್ಲಿ ನಿಲುಗಡೆ ಮಾಡಬಹುದು. ಗಬ್ಬೂರು ಕ್ರಾಸ್‌ನಿಂದ ಬರುವ ವಾಹನಗಳು ತಮ್ಮ ಪ್ರಯಾಣಿಕರನ್ನು ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಇಳಿಸಬಹುದು ಮತ್ತು ಗಿರಾನಿ ಚಾಲ್ ಮೈದಾನ ಮತ್ತು ಎಂ.ಟಿ. ಮಿಲ್ಸ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.
ಕಾರವಾರ ರಸ್ತೆಯಿಂದ ಬರುವ ವಾಹನಗಳು ಗ್ಲಾಸ್ ಹೌಸ್ ವೆಲ್ ಬಳಿ ಜನರನ್ನು ಇಳಿಸಿ, ಗ್ಲಾಸ್ ಹೌಸ್ ವೆಲ್ ಮೈದಾನದಲ್ಲಿ ವಾಹನ ನಿಲ್ಲಿಸಬಹುದು.

ಧಾರವಾಡದಿಂದ ಬರುವ ವಾಹನಗಳು ಹಳೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹೊಸೂರಿನ ರಾಯ್ಕರ್ ಮೈದಾನದಲ್ಲಿ ನಿಲುಗಡೆ ಮಾಡಬಹುದು. ಇದೇ ವೇಳೆ ಬುಧವಾರ ಮತ್ತು ಗುರುವಾರ ಮಧ್ಯಾಹ್ನ 1 ಗಂಟೆಯಿಂದ 7 ಗಂಟೆ ವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕಾರವಾರ ರಸ್ತೆಯಿಂದ ಬರುವ ಸರ್ಕಾರಿ ಸಾರಿಗೆ ಬಸ್‌ಗಳನ್ನು ಕಾರವಾರ ರಸ್ತೆ ಪ್ಲಾಜಾದಲ್ಲಿ (ಸೇತುವೆಯ ಕೆಳಗಡೆ) ಗುರುತಿಸಲಾಗಿರುವ ತಾತ್ಕಾಲಿಕ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.












Click it and Unblock the Notifications