National Youth Festival 2023: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಹುಬ್ಬಳ್ಳಿ, ಜನವರಿ 12: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜನವರಿ 12ರಿಂದ ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಪ್ರಧಾನ ಮಂತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆಯಾಗಿದ್ದು,ಹುಬ್ಬಳ್ಳಿಯ ಕಲಾವಿದರೊಬ್ಬರು ವಿನೂತನ ರೀತಿಯಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿಕೊಳ್ಳಲು ಕಲಾಕೃತಿಯೊಂದನ್ನು ಸಿದ್ಧಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಅಭಿಮಾನಿಯೊಬ್ಬರು ವಿಶೇಷ ಸ್ವಾಗತ ಮಾಡಲು ಮುಂದಾಗಿದ್ದು, ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಕಲಾವಿದ ದಿನೇಶ್ ಚಿಲ್ಲಾಳ ರಂಗೋಲಿಯಲ್ಲಿ ವರ್ಣಮಯವಾಗಿ ನರೇಂದ್ರ ಮೋದಿಯವರ ಚಿತ್ರ ಬಿಡಿಸಿದ್ದಾರೆ.

ರಂಗೋಲಿಯಲ್ಲಿ ನರೇಂದ್ರ ಭಾವಚಿತ್ರ ಅನಾವರಣಗೊಂಡಿದ್ದು, 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿಯವರು ಧರಿಸಿದ್ದ ಪೋಷಾಕಿನ ಚಿತ್ರ ಬಿಡಿಸಲಾಗಿದೆ. ಕಲಾವಿದ ಕೈಚಳಕಕ್ಕೆ ಹುಬ್ಬಳ್ಳಿಯ ಜನತೆ ಮನಸೋತಿದ್ದು, ದಿನೇಶ್ ಚಿಲ್ಲಾಳ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಚೆನ್ನಮ್ಮ ವೃತ್ತಕ್ಕೆ ದೀಪಾಲಂಕಾರ: ಫೋಟೋಗಾಗಿ ಮುಗಿಬಿದ್ದ ಜನರು
ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಚೆನ್ನಮ್ಮ ವೃತ್ತ ಯುವಜನೋತ್ಸವದ ಹಿನ್ನೆಲೆಯಲ್ಲಿ ಫೋಟೋ ತೆಗೆದುಕೊಳ್ಳುವ ಸ್ಥಳವಾಗಿ ಪರಿವರ್ತನೆ ಆಗಿದೆ. ಹುಬ್ಬಳ್ಳಿಯ ಜನರು ಚೆನ್ನಮ್ಮ ವೃತ್ತಕ್ಕೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.

ವಾಣಿಜ್ಯನಗರಿ ಹುಬ್ಬಳ್ಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಚೆನ್ನಮ್ಮ ವೃತ್ತಕ್ಕೆ ದೀಪ ಅಲಂಕಾರ ಮಾಡಲಾಗಿದೆ. ದೀಪದ ಅಲಂಕಾರದಿಂದ ಚೆನ್ನಮ್ಮ ವೃತ್ತ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ವಾಹನ ಸವಾರರು ಸೇರಿದಂತೆ ಜಿಲ್ಲೆಯ ಜನರು ಚೆನ್ನಮ್ಮ ವೃತ್ತದ ವೈಶಿಷ್ಟ್ಯಕ್ಕೆ ಮನಸೋತಿದ್ದು, ವಾಹನ ನಿಲ್ಲಿಸಿ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 7 ಜನ ಎಸ್‌ಪಿ ದರ್ಜೆ ಅಧಿಕಾರಿಗಳು, 25 ಡಿವೈಎಸ್‌ಪಿಗಳು, 60 ಪಿಐ, 18 ಕೆಎಸ್‌ಆರ್‌ಪಿ ಸೇರಿದಂತೆ ಗರುಡಾ, ಸಿಎಆರ್, ಡಿಎಆರ್ ಸಿಬ್ಬಂದಿಯನ್ನು ಭದ್ರತೆ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಂಡಿದೆ.












Click it and Unblock the Notifications