ಕಾಂಗ್ರೆಸ್ ನಾಯಕರು ಗೃಹ ಪ್ರವೇಶಕ್ಕೆ ಹಸು ಬದಲು ಎಮ್ಮೆ ತೆಗೆದುಕೊಂಡು ಹೋಗಲಿ-ಮಹೇಶ್ ಟೆಂಗಿನಕಾಯಿ
ಹುಬ್ಬಳ್ಳಿ, ಜೂನ್ 06: ಗೋ ಹತ್ಯೆ ನಿಷೇಧ ಕಾಯಿದೆ ಬದಲಾವಣೆ ಮಾಡುವ ಕುರಿತಾಗಿ ಮಾತನಾಡುವ ಕಾಂಗ್ರೆಸ್‌ನವರು, ತಮ್ಮ ಮನೆಯ ಗೃಹ ಪ್ರವೇಶಕ್ಕೆ ಹಸು ಬದಲು ಎಮ್ಮೆಯನ್ನು ತೆಗೆದುಕೊಂಡು ಹೋಗಲಿ. ಆಗ ಹಸುವಿನ ಮಹತ್ವ ತಿಳಿಯುತ್ತದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
ಗೋ ಹತ್ಯೆ ಕಾಯ್ದೆ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‌ನ ಅನೇಕ ನಾಯಕರು ಗೋ ಹತ್ಯೆ ನಿಷೇಧ ಕಾನೂನು ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲಿ ಬದಲಾವಣೆ ಮಾಡತ್ತೇವೆ. ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ಪಶುಸಂಗೋಪನಾ ಸಚಿವರು ಕೂಡ ಹಸು, ಎಮ್ಮೆ, ಕೋಣಕ್ಕೆ ಏನೂ ವ್ಯತ್ಯಾಸ ಇರುತ್ತದೆ. ಎಲ್ಲವೂ ಒಂದೇ ಎಂಬ ಮಾತನ್ನು ಹೇಳಿದ್ದಾರೆ. ರಾಜ್ಯದ ಪಶುಸಂಗೋಪನಾ ಸಚಿವರಿಗೆ ನಾನು ಹೇಳುತ್ತೇನೆ. ನಿಮ್ಮ ಮನೆಯ ಗೃಹ ಪ್ರವೇಶಕ್ಕೆ ಹಸು ಬದಲು ಎಮ್ಮೆಯನ್ನು ತೆಗೆದುಕೊಂಡು ಹೋಗಿ. ಆಗ ಹಸುವಿನ ಪವಿತ್ರತೆ ನಿಮಗೆ ತಿಳಿಯುತ್ತದೆ. ಹೀಗಾಗಿ ಕುಚೆಷ್ಟೆ ತನದ ಹೇಳಿಕೆಯನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರು ಭಜರಂಗದಳ ಗೋವಿನ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಹೇಳಿದ್ದಾರೆ. ನಾನು ಸ್ಪಷ್ಟವಾಗಿ ಹೇಳುತ್ತೇನೆ. ಭಜರಂಗದಳದವರು ಹಿಂದುತ್ವದ ಬಗ್ಗೆ ಹೋರಾಟ ಮಾಡಿದ್ದಾರೆ. ಹಿಂದೂ ಸಮಾಜಕ್ಕೆ ಅನ್ಯಾಯ ಆದಾಗ ಹೋರಾಟ ಮಾಡುತ್ತಾರೆ. ತಮ್ಮ ಜೀವವನ್ನು ಒತ್ತೆಯಿಟ್ಟು ಕೆಲಸ ಮಾಡುತ್ತಾರೆ. ದಯಮಾಡಿ ಈ ರೀತಿಯ ಪ್ರಚೋದನೆಯ ಹೇಳಿಕೆಯನ್ನು ನೀಡಬಾರದು ಎಂದು ಒತ್ತಾಯಿಸಿದರು.

ಭಜರಂಗದಳ ಯಾವುದೇ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡಿಲ್ಲ. ಏನೇ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಹಿಡಿದು ಕೊಟ್ಟಿದ್ದಾರೆ. ಇದಕ್ಕೂ ಮೊದಲು ನೀವು ಪಿಎಫ್ಐ, ಎಸ್‌ಡಿಪಿಐ ಸಂಘಟನೆ ಬಗ್ಗೆ ಮಾತಾಡಿ, ಇವು ಸಂಘಟನೆಗಳು ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಲು ಮುಂದಾಗಿವೆ. ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣವಾಗಿವೆ. ಅವುಗಳ ಬಗ್ಗೆ ಮಾತಾಡುವ ನೈತಿಕತೆ ನಿಮಗೆ ಇಲ್ಲದಿರುವಾಗ ಭಜರಂಗದಳ ಬಗ್ಗೆ ಮಾತನಾಡುವ ನೈತಿಕತೆ ಹಕ್ಕು ನಿಮಗಿಲ್ಲ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ಹೊರಹಾಕಿದರು.












Click it and Unblock the Notifications