ಹುಬ್ಬಳ್ಳಿ ಸಿಲಿಂಡರ್ ಸ್ಫೋಟದಲ್ಲಿ ಮಾಲಾಧಾರಿ ಸಾವು: ಗಂಡನ ಶವಕ್ಕಾಗಿ ಪತ್ನಿಯರ ಜಗಳ
ಹುಬ್ಬಳ್ಳಿ, ಡಿಸೆಂಬರ್ 26: ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಿಸದೇ ಇಂದು(ಡಿಸೆಂಬರ್ 26) ಬೆಳಗಿನ ಜಾವ ಮೃತಪಟ್ಟಿದ್ದಾರೆ. ಅಜ್ಜಾಸ್ವಾಮಿ ಉರ್ಪ್ ನಿಜಲಿಂಗಪ್ಪ ಬೇಪಾರಿ(58) ಹಾಗೂ ಸಂಜಯ ಸವದತ್ತಿ (20) ಮೃತ ದುರ್ದೈವಿಗಳು. ಸದ್ಯ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ನಿಜಲಿಂಗಪ್ಪ ಬೇಪೂರಿ ಮೃತದೇಹಕ್ಕಾಗಿ ಆತನ ಇಬ್ಬರ ಪತ್ನಿಯರು ಜಗಳವಾಡಿಕೊಂಡ ಘಟನೆ ಹುಬ್ಬಳ್ಳಿ ನಗರದ ಕಿಮ್ಸ್ ಶವಾಗಾರದ ಮುಂದೆ ನಡೆದಿದೆ. ನಿಜಲಿಂಗಪ್ಪ ಅವರ ಮೊದಲ ಪತ್ನಿ ನಿರ್ಮಲಾ ಅವರು ಅಂಬ್ಯುಲೆನ್ಸ್ ನಲ್ಲಿ ಮೃತದೇಹವನ್ನು ಹುಟ್ಟುರಾದ ಇಂಗಳಿಗೆ ತಗೆದುಕೊಂಡು ಹೋಗಲು ಸಿದ್ದರಾಗಿದ್ದರು. ಈ ವೇಳೆ ಅಲ್ಲಿಗೆ ಬಂದ ಎರಡನೇ ಪತ್ನಿ ಶಾಂತಾ ಅವರನ್ನು ತಡೆದು, ಶವವನ್ನು ಮೊದಲು ನನ್ನ ಮನೆಗೆ ತಗೆದಕೊಂಡು ಹೋಗುತ್ತೇನೆ ಎಂದು ಜಗಳ ತಗೆದರು.

'ಇಷ್ಟು ದಿನ ನಾನು ಅವರನ್ನು ಸಾಕಿದ್ದೇನೆ. ಕೊನೆ ಘಳಿಗೆವರೆಗೂ ನೋಡಿಕೊಂಡಿದ್ದೇನೆ. ನನ್ನ ಪತಿ ನನ್ನ ಜೊತೆಗೆ ಇದ್ದರು. ಸುಟ್ಟು ಗಾಯಗೊಂಡು ಆಸ್ಪತ್ರೆ ಸೇರಿದರೂ ಮೊದಲ ಪತ್ನಿ ಬಂದಿಲ್ಲ. ಈಗ ಪರಿಹಾರ ನೀಡುತ್ತಾರೆ ಎಂದು ಬಂದಿದ್ದಾರೆ' ಎಂದು ಎರಡನೇ ಪತ್ನಿ ಶಾಂತಾ ಮೊದಲ ಪತ್ನಿ ನಿರ್ಮಲಾ ವಿರುದ್ಧ ಆರೋಪಿಸಿದರು. ಈ ವೇಳೆ ಇಬ್ಬರ ಮಧ್ಯೆ ಜಗಳ ಜೋರಾಗಿದೆ.
ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಇಬ್ಬರ ಪತ್ನಿಯರ ಜಗಳ ಬಿಡಿಸಿ, ಮಾತುಕತೆ ನಡೆಸಿ ಮೊದಲು ಎರಡನೇ ಪತ್ನಿ ಮನೆಯಲ್ಲಿ ಪೂಜೆ ಮಾಡಲು ಅವಕಾಶ ಕೊಡಬೇಕು. ಬಳಿಕ ಮೊದಲೇ ಪತ್ನಿ ಮನೆ ಊರಲ್ಲಿ ಅಂತ್ಯಕ್ರಿಯೆ ಮಾಡಲು ಸೂಚಿಸಿದ್ದಾರೆ. ಅದರಂತೆ ತಾಜನಗರದಲ್ಲಿರುವ ಎರಡನೇ ಪತ್ನಿ ಮನೆಯಲ್ಲಿ ಪೂಜೆ ನಡೆಸಿ ಬಳಿಕ ನಿಜಲಿಂಗಪ್ಪನ ಹುಟ್ಟುರಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ
ಇನ್ನು ಈ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

'ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಇಂದು ಸಾವಿಗೀಡಾಗಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮೃತ ಅಯ್ಯಪ್ಪ ಮಾಲಾಧಾರಿಗಳನ್ನು ನಿಜಲಿಂಗಪ್ಪ ಬೇಪಾರಿ ಹಾಗೂ ಸಂಜಯ ಸವದತ್ತಿ ಎಂದು ಗುರುತಿಸಲಾಗಿದೆ. ಉಳಿದ ಏಳು ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಬೆಂಗಳೂರು ಮತ್ತಿತರ ಕಡೆಗಳಿಂದ ಉನ್ನತ ಚಿಕಿತ್ಸೆಗಾಗಿ ತಜ್ಞ ವೈದ್ಯರನ್ನು ಕರೆಸಲಾಗಿದೆ' ಎಂದು ಸಿಎಂ ತಿಳಿಸಿದ್ದಾರೆ.












Click it and Unblock the Notifications