Threat Audio: ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ಹತ್ಯೆ ಆಡಿಯೋ ಬಗ್ಗೆ ತನಿಖೆ ನಡೆಸುತ್ತೇವೆಂದ ಸಿಎಂ
ಹುಬ್ಬಳ್ಳಿ, ಮೇ, 06: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಆಡಿಯೋ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಆಡಿಯೋ ತಿರುಚಲಾಗಿದೆಯೇ ಎಂದು ನೋಡಬೇಕು. ಅಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಆಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಇನ್ನು ಬಿ.ಎಲ್.ಸಂತೋಷ್ ಇತ್ತೀಚೆಗಷ್ಟೇ ಲಿಂಗಾಯತ ಮತಗಳು ಬಿಜೆಪಿಗೆ ಬೇಡ ಎಂದು ಹೇಳಿದ್ದಾರೆ ಎನ್ನುವ ಸುದ್ದಿಯು ಎಲ್ಲೆಡೆ ಹರಡಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ಬಿ.ಎಲ್.ಸಂತೋಷ್ ಅವರು ಲಿಂಗಾಯತ ಮತಗಳು ಬಿಜೆಪಿಗೆ ಬೇಡ ಎಂದು ಹೇಳಿದ್ದಾರೆ ಅನ್ನುವ ಸುದ್ದಿ ಸುಳ್ಳು. ಅವರು ಹಾಗೆ ಹೇಳಿಲ್ಲ. ತಪ್ಪಾಗಿ ಭಾವಿಸಬೇಡಿ ಎಂದು ಹೇಳಿದರು.

ಅಲ್ಲದೆ ಮತ್ತೊಂದೆಡೆ ಇತ್ತೀಚೆಗಷ್ಟೇ ನಟ ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಪ್ರಚಾರಕ್ಕಿಳಿದಿದ್ದರು. ಆಗಿನಿಂದ ಅವರನ್ನು ಕೆಲ ಬಿಜೆಪಿ ನಾಯಕರು ಟೀಕಿಸಿದ್ದರು. ಅಲ್ಲದೇ ಕೆಲ ಕಿಡಿಗೇಡಿಗಳು ಟ್ರೋಲ್ ಸಹ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪ್ರಜಾಪ್ರಭುತ್ವದಲ್ಲಿ ನಟರು ಯಾವ ಪಕ್ಷದ ಪರವಾಗಿಯಾದರೂ ಪ್ರಚಾರ ಮಾಡಬಹುದು. ಇನ್ನು ಪ್ರತಾಪ್ ಸಿಂಹ ಮತ್ತು ಶಿವರಾಜ್ ಕುಮಾರ್ ಟೀಕೆ ಅವರಿಗೆ ಬಿಟ್ಟ ವಿಚಾರ. ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ನನಗೇನು ಅಭ್ಯಂತರ ಇಲ್ಲ ಎಂದರು.
ಇನ್ನು ಸೋನಿಯಾ ಗಾಂಧಿ ಪ್ರಚಾರಕ್ಕೆ ಬರುತ್ತಿದ್ದಾರೆ. ಅದು ಅವರ ಪಕ್ಷದ ಪ್ರಚಾರವಾಗಿದೆ. ಹಾಗೆಯೇ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾವೇರಿಗೆ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಮೋದಿ ಅಲೆ ಜಾಸ್ತಿಯಾಗುತ್ತದೆ. ಆದ್ದರಿಂದ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗದ್ದುಗೆ ಏರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.












Click it and Unblock the Notifications