ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದ್ದೇನು?
ಹುಬ್ಬಳ್ಳಿ, ಮಾರ್ಚ್ 28: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಲಿಂಗಾಯತ ನಾಯಕರಿಗೆ, ಸಮಾಜದರಿಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ಈ ಕುರಿತು ಸ್ವಾಮೀಜಿಯವರ ಬಳಿ ನಾನು ಮಾತನಾಡುತ್ತೇನೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಲಿಂಗಾಯತರು ಸೇರಿದಂತೆ ಇತರ ಸಮಾಜದವರಿಗೆ ಅನ್ಯಾಯವಾಗಿದೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸುವಂತೆ ಶಿರಹಟ್ಟಿ ಮಠ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದ್ದು, ಈ ಕುರಿತು ಮಾತನಾಡುವುದಾಗಿ ಶಾಸಕರು ಹುಬ್ಬಳ್ಳಿಯಲ್ಲಿ ಗುರುವಾರ ತಿಳಿಸಿದರು.

ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆವ ಜೋಶಿ
ಧಾರವಾಡ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಅನ್ಯಾಯ ಆಗಿಲ್ಲ. ಈ ಹಿಂದೆ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಶಾಸಕರು ಇದ್ದರು. ಈಗ ಸಹ ಧಾರವಾಡ ಜಿಲ್ಲೆಯಲ್ಲಿ ನಾಲ್ಕು ಶಾಸಕರು ಇದ್ದಾರೆ. ಎಲ್ಲರನ್ನೂ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ ಎಂದರು.
ಈ ಕುರಿತು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರ ಜೊತೆಗೆ ನಾನು ಮಾತನಾಡುವೆ. ಬಹುಶಃ ಗುರುಗಳಿಗೆ ತಪ್ಪು ಸಂದೇಶ ಹೋಗಿರಬಹುದು. ರಾಜಕಾರಣದಲ್ಲಿ ಒಂದೇ ಸಮುದಾಯದವರು ಇರಬಾರದು ಎಲ್ಲರು ಬರಬೇಕು ಎಂದರು.
ಕಾಂಗ್ರೆಸ್‌ನಲ್ಲಿ ಮನೆ ಒಂದು ಬಾಗಿಲು ಮೂರು
ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆದ ಜಗಳ ನೋಡಿದ್ದೇವೆ. ಸಭಾಪತಿ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿದಿದೆ. ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಏನು ಸರಿ ಇಲ್ಲ. ಕಾಂಗ್ರೆಸ್ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಸರ್ಕಾರ ಬಂದು 9 ತಿಂಗಳಾಯಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳನ್ನು ನೋಡಿದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಗುಂಪಾಗಲಿ ಇನ್ನೊಂದು ಗುಂಪಾಗಲಿ ಇಂತಹ ಹಲವು ಗುಂಪುಗಳನ್ನು ನಾವು ನೋಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಬದಲಾವಣೆ?
ಲೋಕಸಭಾ ಚುನಾವಣೆ ಬಳಿಕ ದೊಡ್ಡ ಮಟ್ಟದಲ್ಲಿ ಸ್ಪೋಟಗೊಂಡು ಕಾಂಗ್ರೆಸ್ ಆಂತರಿಕ ಬೇಗುದಿಗಳೆಲ್ಲವು ಹೊರಗಡೆ ಬರಲಿವೆ. ಚುನಾವಣೆ ಮೊದಲು ಕಾಂಗ್ರೆಸ್‌ನಲ್ಲಿ ಈಗೇನು ಘಟನೆಗಳು ನಡೆದಿವೆಯೋ ಅವೆಲ್ಲವುಗಳು ಚುನಾವಣೆ ನಂತರ ಬಹಳ ಬದಲಾಗಲಿವೆ. ಪಕ್ಷದೊಳಗಿನ ಬಣ ರಾಜಕೀಯ ಬಯಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಬುಧವಾರ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಲಿಂಗಾಯತ ಮಠಾಧೀಶರ ಸಭೆ ನಡೆಯಿತು. ಪ್ರಹ್ಲಾದ್ ಜೋಶಿಯವರಿಂದ ಲಿಂಗಾಯತರಿಗೆ ಮಠಾಧೀಶರಿಗೆ ಅವಮಾನವಾಗಿದೆ. ಲಿಂಗಾಯರು ಸೇರಿದಂತೆ ಇತರ ಸಮಾಜದವರಿಗೆ ಅನ್ಯಾಯವಾಗಿದೆ. ಅವರನ್ನು ಧಾರವಾಡ ಕ್ಷೇತ್ರದಿಂದ ಮಾರ್ಚ್ 31ರೊಳಗಾಗಿ ಬದಲಿಸಬೇಕು. ಇಲ್ಲವಾದರೆ ದಿಂಗಾಲೇಶ್ವರ ಶ್ರೀಗಳನ್ನು ಧಾರವಾಡದಿಂದ ಕಣಕ್ಕಿಳಿಸುವ ಬಗ್ಗೆ ಏಪ್ರಿಲ್ 02ರಂದು ತೀರ್ಮಾನಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಶ್ರೀಗಳು ತಿಳಿಸಿದ್ದರು.
ಇದರ ಬೆನ್ನಲ್ಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿರಂತರ ಸಭೆ ನಡೆ, ಆದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರು. ಇದೀಗ ಶಾಸಕರು ಸಹ ಸ್ವಾಮೀಜಿಯವರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.












Click it and Unblock the Notifications