ಮುಖ್ಯಮಂತ್ರಿ ಆಸೆಗಾಗಿ ಎಂಬಿ ಪಾಟೀಲ್, ಡಿಕೆಶಿ 50 ಕೋಟಿ ರೂ. ಹೂಡಿಕೆ: ರೇಣುಕಾಚಾರ್ಯ
Recommended Video
ಹುಬ್ಬಳ್ಳಿ, ಮೇ 15: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಡಿ.ಕೆ. ಶಿವಕುಮಾರ್, ಉಪ ಚುನಾವಣೆಯಲ್ಲಿ ಗೆಲ್ಲಲು ತಲಾ 50 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿಂದ ಇಬ್ಬರೂ ಕುಂದಗೋಳ ಕ್ಷೇತ್ರ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ತಮ್ಮ ವರ್ಚಸ್ಸು ತೋರಿಸುವ ಸಲುವಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ತಲಾ 50 ಕೋಟಿ ರೂ. ಬಂಡವಾಳ ಹಾಕಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂದಗೋಳ ಕ್ಷೇತ್ರದಲ್ಲಿ ಹಣ ಹಂಚುವ ಸಲುವಾಗಿಯೇ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಿಂದ 500 ಮಂದಿ ಬೆಂಬಲಿಗರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ಚುನಾವಣಾ ಉಸ್ತುವಾರಿ ವಹಿಸಿಕೊಂಡ ಬಳಿಕ ಕ್ಷೇತ್ರದ ಅಭಿವೃದ್ಧಿ ಕುರಿತು ಏನನ್ನೂ ಮಾತನಾಡಿಲ್ಲ. ಡಿಕೆಶಿ ಜಲಸಂಪನ್ಮೂಲ ಸಚಿವರಲ್ಲ, ಭ್ರಷ್ಟಸಂಪನ್ಮೂಲ ಸಚಿವ ಎಂದು ಟೀಕಿಸಿದರು.

ಕ್ಷೇತ್ರದ ಹರಕುಣಿಯಲ್ಲಿ ಮೂರು ವರ್ಷದ ಹಿಂದೆ ಡಿ.ಕೆ. ಶಿವಕುಮಾರ್ ಅವರು ನಿರಂತರ ಜ್ಯೋತಿ ಯೋಜನೆಗೆ ಚಾಲನೆ ಕೊಟ್ಟಿದ್ದರು. ಈಗ ಆ ಗ್ರಾಮದಲ್ಲಿ ಬೆಳಕೇ ಇಲ್ಲ. ಶಿವಕುಮಾರ್ ಅವರೇನಿದ್ದರೂ ಕಾಗದದ ಮೇಲಿನ ಹುಲಿ. ಅವರ ಆಟ ಇಲ್ಲಿ ನಡೆಯುವುದಿಲ್ಲ ಎಂದರು.












Click it and Unblock the Notifications