ಮಠಾಧೀಶರ ಮೀಸಲಾತಿ ಹೋರಾಟ: ಕೇಂದ್ರ ಸರ್ಕಾರಕ್ಕೆ ಸ್ವಾಮೀಜಿಗಳ ಎಚ್ಚರಿಕೆ
ಹುಬ್ಬಳ್ಳಿ, ಜೂನ್ 16: ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ವಿವಿಧ ಮಠಾಧೀಶರಿಂದ ಹೋರಾಟ ಆರಂಭವಾಗಿದೆ. ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡಗಳಿಗೆ ಕೇಂದ್ರದ ಓಬಿಸಿ ಕಲ್ಪಿಸಬೇಕು ಎಂಬ ಹೋರಾಟದ ಮೂಲಕ ಮಠಾಧೀಶರು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಒಳ ಪಂಗಡಗಳಿಗೆ ಕೇಂದ್ರದ ಓಬಿಸಿ ಮೀಸಲಾತಿಗಾಗಿ ವಿವಿಧ ಮಠಾಧೀಶರು ಇದೀಗ ಹೊಸ ಹೋರಾಟ ಹುಟ್ಟು ಹಾಕಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಪಂಚಪೀಠಾಧೀಶರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ನಿರ್ಧರಿಸಿ ಹೋರಾಟ ಆರಂಭಿಸಲಾಗಿದೆ.

ಚಿಂತನ ಮಂಥನ ಸಭೆ ನಡೆಸುವ ಮೂಲಕ, ವೀರಶೈವ ಎಲ್ಲಾ ಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಹಕ್ಕೋತ್ತಾಯ ಮಂಡಿಸಲಾಯಿತು. ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದಾರಾಮ ಪಂಡತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ವಿವಿಧ ಮಠಾಧೀಶರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳಿಗೆ ಓಬಿಸಿ ಮೀಸಲಾತಿ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ನಿಟ್ಟಿನಲ್ಲಿ ಮಠಾಧೀಶರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.
ಇನ್ನು ಪ್ರಮುಖವಾಗಿ ಈಗಾಗಲೇ ವೀರಶೈವ ಲಿಂಗಾಯತದ 28 ಉಪಪಂಗಡಗಳು ಓಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಾಣಿಗ, ಲಿಂಗಾಯತ ಕುರುಬ, ಹಡಪದ, ಮೇದಾರ, ನೇಕಾರ ಸೇರಿ 28 ಉಪಪಂಗಡಗಳು ಓಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಇನ್ನುಳಿದ 59 ಉಪ ಪಂಗಡಗಳನ್ನೂ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಮಠಾಧೀಶರಿಂದ ಒತ್ತಾಯ ಕೇಳಿಬಂದಿದೆ.
ಈ ಹಕ್ಕೊತ್ತಾಯ ಸಮಾಜದ ಭಕ್ತರ ಮಕ್ಕಳಿಗೆ ಉಪಯೋಗವಾಗುವಂತಹದು. ಎಲ್ಲಾ ಮಠಾಧೀಶರ ಮೇಲೆ ಸಮಾಜದ ಋಣ ಇದೆ
ಮಠಾಧೀಶರನ್ನು ಸಮಾಜ ತಮ್ಮ ಮಕ್ಕಳಂತೆ ಪೋಷಿಸಿಕೊಂಡು ಬಂದಿದೆ. ಮಠಗಳನ್ನು, ಮಠಾಧೀಶರನ್ನು ಪೂಜ್ಯ ಭಾವನೆಯಿಂದ ಸಮಾಜದ ಜನ ನಡೆದುಕೊಂಡು ಬಂದಿದ್ದಾರೆ. ಅದರ ಋಣ ತೀರಿಸಲು ಎಲ್ಲಾ ಮಠಾಧೀಶರು ಈ ಹಕ್ಕೊತ್ತಾಯ ಮಾಡುತ್ತಿದ್ದಾರೆ. 78 ಉಪಪಂಗಡಗಳಲ್ಲಿ 28 ಉಪಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲಾಗಿದೆ. ಇನ್ನೂ 60ಕ್ಕೂ ಅಧಿಕ ಉಪಪಂಗಡಗಳು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕಿದೆ, ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮುಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಯಲ್ಲಿ ತರಬೇಕೆಂಬ ನಿಟ್ಟಿನಲ್ಲಿ, ಮಠಾಧೀಶರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವೀರಶೈವ ಮಠಾಧೀಶರ ಈ ಒತ್ತಾಯಕ್ಕೆ ಕೇಂದ್ರ ಸರ್ಕಾರ ಯಾವ ಮಟ್ಟಕ್ಕೆ ಮಣಿಯುತ್ತದೆ. ಓಬಿಸಿ ಮೀಸಲಾತಿ ಕುರಿತಂತೆ ಕೇಂದ್ರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಹೋರಾಟ ಮತ್ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications