ಹುಬ್ಬಳ್ಳಿಯಲ್ಲಿನ ಎಲ್ ಆಂಡ್ ಟಿ ಕಂಪನಿ ನಿರ್ಲಕ್ಷ್ಯಕ್ಕೆ ಬಡ ಕಾರ್ಮಿಕ ಬಲಿ
ಹುಬ್ಬಳ್ಳಿಯ ಗಬ್ಬೂರು ಸರ್ಕಲ್ ಬಳಿಯಲ್ಲಿನ ವಾಟರ್ ಟ್ಯಾಂಕ್ ಸ್ವಚ್ಚಗೊಳಿಸುವ ಕಾರ್ಮಿಕರೊಬ್ಬರು ಅಲ್ಲಿದ್ದ ಪೈಪ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ, ಮಾರ್ಚ್, 02: ಹುಬ್ಬಳ್ಳಿಯ ಗಬ್ಬೂರು ಸರ್ಕಲ್ ಬಳಿಯಲ್ಲಿನ ವಾಟರ್ ಟ್ಯಾಂಕ್ ಸ್ವಚ್ಚಗೊಳಿಸುವ ಕಾರ್ಮಿಕರೊಬ್ಬರು ಅಲ್ಲಿದ್ದ ಪೈಪ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇದು 52 ವರ್ಷದ ಹಳೆಯ ವಾಟರ್ ಟ್ಯಾಂಕ್ ಆಗಿದ್ದು, ಇಲ್ಲಿ ಕಾರ್ಮಿಕ ಮೃತಪಟ್ಟ ತಕ್ಷಣ ನೂರಾರು ಜನರು ಜಮಾವಾಣೆ ಗೊಂಡಿದ್ದಾರೆ. ಅಷ್ಟಕ್ಕೂ ಕಾರ್ಮಿಕ ಮೃತನಾಗಿರುವುದಕ್ಕೆ ಈ ಒಂದು ಕಂಪನಿಯ ನಿರ್ಲಕ್ಷ್ಯ ಅಂತಲೇ ಅಲ್ಲಿನ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ನಿರ್ಲಕ್ಷ್ಯವಹಿಸಿದ ಕಂಪನಿ ಯಾವುದು ಅಂತೀರಾ ಇಲ್ಲಿದೆ ನೋಡಿ ವಿವರ.
ಎಲ್ ಆಂಡ್ ಟಿ ಕಂಪನಿ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ
ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಎಲ್ ಆಂಡ್ ಟಿ ಕಂಪನಿಗೆ ಗುತ್ತಿಗೆ ನೀಡಿದೆ. ಆದರೆ ಎಲ್ ಆಂಡ್ ಟಿ ಕಂಪನಿಗೆ ಗುತ್ತಿಗೆ ನೀಡಿದಾಗಿನಿಂದ ಒಂದಿಲ್ಲೊಂದು ಎಡವಟ್ಟನ್ನು ಮಾಡುತ್ತಲೇ ಬಂದಿದೆ. ಇದೀಗ ಕಂಪನಿ ಮಾಡಿದ ಮತ್ತೊಂದು ಎಡವಟ್ಟಿನಿಂದ ಅಮಾಯಕ ಕಾರ್ಮಿಕನೊಬ್ಬ ಪ್ರಾಣ ತೆತ್ತಿದ್ದಾನೆ. ನಗರದ ಗಬ್ಬೂರಿನ ಜನರಿಗೆ ಕುಡಿಯುವ ನೀರನ್ನು ತಲುಪಿಸುವ ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿ ಹೊತ್ತಿತ್ತು. ಈ ಹಿನ್ನೆಲೆಯಲ್ಲಿ ಆ ವಾಟರ್ ಟ್ಯಾಂಕ್ ಕ್ಲೀನ್ ಮಾಡಿಸಲು ಮುಂದಾಗಿತ್ತು.

ಪೈಪ್‌ನಲ್ಲಿ ಸಿಲುಕಿ ಮೃತಪಟ್ಟ ಕಾರ್ಮಿಕ
ಹೀಗಾಗಿ ಎಲ್ ಅಂಡ್ ಟಿ ಕಂಪನಿಯು ನಗರದಲ್ಲಿನ ಮೂವರು ಕಾರ್ಮಿಕರನ್ನು ಕರೆಯಿಸಿ ಅವರಿಗೆ ಸುರಕ್ಷತಾ ಸಾಮಗ್ರಿಗಳನ್ನು ನೀಡದೆ ಟ್ಯಾಂಕ್ ಕ್ಲೀನ್ ಮಾಡಿಸಲು ಮುಂದಾಗಿದೆ. ಟ್ಯಾಂಕ್‌ನಲ್ಲಿ ಇಳಿದ ಮೂವರ ಪೈಕಿ ಶೇಖ್ ಜಿಲಾನಿ ಎಂಬಾತ ಅಲ್ಲಿದ್ದ ಪೈಪ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. ಇನ್ನುಳಿದ ಪಾರೂಖ್ ಹಾಗೂ ದಾದಾ ಅಮೀರ್ ಅನ್ನುವವರು ಟ್ಯಾಂಕ್‌ನಲ್ಲಿಯೇ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಆಪತ್ಭಾಂಧವ ರೀತಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತಪಟ್ಟ ಶೇಖ ಜಿಲಾನಿ ಶವ ಹಾಗೂ ಟ್ಯಾಂಕ್‌ನಲ್ಲಿದ್ದ ಸಿಲುಕಿದ್ದ ಇನ್ನಿಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.

ಕಾರ್ಮಿಕ ಶೇಖ್ ಜಿಲಾನಿ ಸಾವಿಗೆ ಕಾರಣವಾದ ಎಲ್ ಆಂಡ್ ಟಿ ಕಂಪನಿಯ ಸಿಬ್ಬಂದಿಗಳ ವಿರುದ್ಧ ಬೆಂಡಿಗೇರಿ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಹೊಟ್ಟೆಪಾಡಿಗಾಗಿ ಬಂದಿದ್ದ ಜಿಲಾನಿ ಕಂಪನಿ ಮಾಡಿದ ತಪ್ಪಿನಿಂದ ಇದೀಗ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ. ಪಾಲಿಕೆ ಅಧಿಕಾರಿಗಳು ಸಾವಿಗೀಡಾದ ಕಾರ್ಮಿಕನ ಕುಟುಂಬಕ್ಕೆ ಏನಾದರೂ ಸಹಾಯ ಹಸ್ತದ ಮೂಲಕ ನೆರವಾಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಿದೆ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications