ಹುಬ್ಬಳ್ಳಿ: ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಫ್ಲೈ ಓವರ್ ಅಪ್‌ಡೇಟ್
ಹುಬ್ಬಳ್ಳಿ, ಮೇ 20: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಹತ್ವದ ಯೋಜನೆ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್. 2025ರ ಏಪ್ರಿಲ್‌ನಿಂದ ಈ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಸುಮಾರು 361.5 ಮೀಟರ್ ಉದ್ದದ ಫ್ಲೈ ಓವರ್ ಕಾಮಗಾರಿಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಈ ಯೋಜನೆ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತ ಟಿ. ಪ್ರದೀಪ್, ಡಿಸಿಪಿ ರವೀಶ ಸಿ. ಆರ್., ಮಹಾನಗರಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯಕುಮಾರ ಮುಂತಾದ ಅಧಿಕಾರಿಗಳ ಜೊತೆ ಚರ್ಚಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, "ಕಳೆದ ಒಂದು ತಿಂಗಳಿನಿಂದ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಕ್ಷೀಪ್ರಗತಿಯಲ್ಲಿ ನಡೆಯುತ್ತಿದೆ. 120 ದಿನಗಳ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದನ್ನು ಈ ಮೊದಲೇ ಸಾರ್ವಜನಿಕರಿಗೆ ತಿಳಿಸಲಾಗಿತ್ತು. ಅದರಂತೆ ಏಪ್ರಿಲ್ 20ರಿಂದ ವೇಗವಾಗಿ ಕಾಮಗಾರಿ ನಡೆಯುತ್ತಿದೆ" ಎಂದರು.
"ಸಂಚಾರ ದಟ್ಟಣೆ ಸಮಸ್ಯೆ ಆಗದಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ನಿಗದಿತ ಕಾಲಮಿತಿಗಿಂತ ವೇಗವಾಗಿ ಕಾಮಗಾರಿ ಭರದಿಂದ ಸಾಗುತ್ತಿದೆ. ಗುಣಮಟ್ಟದ ಕಾಮಗಾರಿ, ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ" ಎಂದು ಹೇಳಿದರು.
"ವಿವಿಧ ರಸ್ತೆ ಕಾಮಗಾರಿಗಳು ನಡೆಯಬೇಕಿವೆ. ಹಳೆ ಬಸ್ ನಿಲ್ದಾಣ ಎದುರಿನ ಸ್ಥಳದಲ್ಲಿ ಫಿಲ್ಲರ್ ಅಳವಡಿಸಬೇಕಿದೆ. ಕಾಮಗಾರಿಗೆ ಅವಶ್ಯವಿರುವ ಕಾರ್ಮಿಕರು ಈಗಾಗಲೇ ಲಭ್ಯವಿದ್ದಾರೆ. 4 ಫಿಲ್ಲರ್‌ಗಳು ಮುಕ್ತಾಯಗೊಂಡಿದ್ದು, 2 ಫಿಲ್ಲರ್‌ಗಳು ಬಾಕಿಯಿವೆ" ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.
"ಸ್ಲ್ಯಾಬ್‌ಗಳನ್ನು ಹಾಕಲಾಗುತ್ತಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಸಾರ್ವಜನಿಕರಿಗೆ ನೀಡಲಾಗಿತ್ತು. ಅದರಂತೆ ಕೆಲಸಗಳು ಭರದಿಂದ ಸಾಗಿವೆ. ಶೀಘ್ರಗತಿಯಲ್ಲಿ ಕಾಮಗಾರಿ ಮುಕ್ತಾಯಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುವುದು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
"ಫ್ಲೈ ಓವರ್ ಕಾಮಗಾರಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಒಂದು ಹಂತದ ಕಾಮಗಾರಿಗೆ ಮುಕ್ತಾಯವಾದ ನಂತರ ಇನ್ನೊಂದು ಹಂತದ ಕಾಮಗಾರಿಯನ್ನು ಕೈಗೊಳ್ಳಲಾಗುವುದು" ಎಂದರು.
"ಫ್ಲೈ ಓವರ್ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲೇ ಪೂರ್ಣಗೊಳಿಸಲಾಗುತ್ತದೆ. ಟ್ರಾಫಿಕ್ ವ್ಯವಸ್ಥೆ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಒಂದು ಹಂತದ ಕಾಮಗಾರಿ ಮುಗಿದ ಬಳಿಕ ಇನ್ನೊಂದು ಹಂತದ ಕಾಮಗಾರಿಯನ್ನು ಆರಂಭಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
2025ರ ಮಾರ್ಚ್‌ನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಫ್ಲೈ ಓವರ್ ಕಾಮಗಾರಿ ಚುರುಕುಗೊಳಿಸಬೇಕು ಎಂದು ಎನ್‌ಹೆಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಕುರಿತು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಧಾರವಾಡ ಜಿಲ್ಲಾಡಳಿತದ ಜೊತೆ ಸಭೆಯನ್ನು ಸಹ ನಡೆಸಿದ್ದರು.
ಈ ಫ್ಲೈ ಓವರ್ ಕಾಮಗಾರಿಗೆ ಕೇಂದ್ರ ಸರ್ಕಾರ ಅಗತ್ಯ ಅನುದಾನವನ್ನು ನೀಡಿದರೂ ಸಹ ಯೋಜನೆಯನ್ನು ವಿಳಂಬ ಮಾಡಲಾಗುತ್ತಿದೆ. ಕಾಮಗಾರಿ ಇನ್ನು ಅರ್ಧದಷ್ಟು ಸಹ ಪೂರ್ಣಗೊಂಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಚುರುಕುಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.












Click it and Unblock the Notifications