ಕಿಮ್ಸ್ ವೈದ್ಯರ ಎಡವಟ್ಟು:ಜನಿಸಿದ್ದು ಗಂಡು ಮಗು, ಪೋಷಕರಿಗೆ ನೀಡಿದ್ದು ಹೆಣ್ಣು ಮಗು
ಹುಬ್ಬಳ್ಳಿ, ಸೆಪ್ಟೆಂಬರ್ 21: ಹುಬ್ಬಳ್ಳಿ ನಗರದ ವಿದ್ಯಾನಗರದದಲ್ಲಿನ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಸಂಜೀವಿನಿ. ಆದರೆ ಆಸ್ಪತ್ರೆ ವೈದ್ಯರ ಹಾಗೂ ಸಿಬ್ಬಂದಿಯ ಎಡವಟ್ಟಿನಿಂದ ಸ್ಥಳೀಯರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಬೇಕಂತಲೋ ಅಥವಾ ಗೊತ್ತಿಲ್ಲದೆಯೋ ದಿನ ಒಂದಲ್ಲ ಒಂದು ವಿವಾದ, ಎಡವಟ್ಟು ಕಿಮ್ಸ್‌ನಲ್ಲಿ ಮಾಮೂಲಿಯಾಗಿದೆ.
ಇದೀಗ ಆಸ್ಪತ್ರೆಯ ಮತ್ತೊಂದು ದೊಡ್ಡ ಕಳ್ಳಾಟ ಬಯಲಾಗಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಅದಲು ಬದಲಾಗಿದೆ. ಗಂಡು ಮಗು ಹುಟ್ಟಿತ್ತು. ಆದರೆ, ವೈದ್ಯರು ತಾಯಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಹಾಗಾದರೆ ಗಂಡು ಮಗುವನ್ನು ಅಲ್ಲಿರುವ ಸಿಬ್ಬಂದಿ ಮಾರಾಟ ಮಾಡುವುದಕ್ಕೆ ಮುಂದಾಗಿದ್ದರು ಎನ್ನುವ ಅನುಮಾನವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರುಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಕಿಮ್ಸ್ ಸಿಬ್ಬಂದಿಯೇ ಗಂಡು ಮಗು ಎಂದು ದಾಖಲಾತಿ ಕೊಟ್ಟಿದ್ದಾರೆ. ಮಗು ತೂಕ ಕಡಿಮೆ ಇದೆ ಎನ್ನುವ ಕಾರಣಕ್ಕೆ ಮಗು ಐಸಿಯು ನಲ್ಲಿ ಇಡಲಾಗಿತ್ತು. 15 ದಿನಗಳ ಕಾಲ ಗಂಡು ಮಗು ಎಂದು ನಂಬಿದ್ದ ದಂಪತಿಗೆ ಶಾಕ್ ಎದುರಾಗಿತ್ತು.
ಆದರೆ ಬುಧವಾರ ಸಿಬ್ಬಂದಿ ಮಗುವಿನ ಪೋಷಕರಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಇದರಿಂದ ಪೋಷಕರು ಗೊಂದಲಕ್ಕೀಡಾಗಿದ್ದರೆ. 15 ದಿನಗಳ ಹಿಂದೆ ಗಂಡು ಮಗು ಎಂದು ಹೇಳಿದ್ದವರು, ಈಗ ಹೆಣ್ಣು ಮಗು ನೀಡಿದ್ದಾರೆ ಎಂದು ಮಗುವಿನ ಪೋಷಕರು ಸಿಬ್ಬಂದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಇದೊಂದೆ ಘಟನೆ ಅಲ್ಲ, ಕಿಮ್ಸ್‌ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಯಡವಟ್ಟು ಸಹಜವಾಗಿದೆ. ವೈದ್ಯರ ನಿರ್ಲಕ್ಷ್ಯ, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೆ ಇರುವುದು, ಮಕ್ಕಳ ಮಾರಾಟದ ಬಗ್ಗೆಯೂ ಕಿಮ್ಸ್ ಮೇಲೆ ಗಂಭೀರ ಆರೋಪ ಇದೆ. ಇವತ್ತಿನ ಯಡವಟ್ಟು ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಗಂಡು ಮಗು ಎಂದು ಹೆಣ್ಣು ಮಗು ಕೊಡುವ ಮೂಲಕ ಗಂಡು ಮಗು ಮಾರಾಟ ಮಾಡೋಕೆ ಮುಂದಾದರಾ? ಎನ್ನುವ ಅನುಮಾನ ಮೂಡಿದೆ.

ಒಟ್ಟಾರೆ ಕಿಮ್ಸ್‌ನಲ್ಲಿ ನಡೆಯುವ ಬೆಳವಣಿಗೆಗಳ ಹಿಂದೆ ಸಾಕಷ್ಟು ಅನುಮಾನ ಇದೆ.ಮಕ್ಕಳ ವಿಷಯದಲ್ಲೂ ಕಳ್ಳಾಟ ಆಡುವ ವೈದ್ಯರು, ಸಿಬ್ಬಂದಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications