ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ, ರಸ್ತೆ ಸಂಪೂರ್ಣ ಹೊಳೆ, ಮನೆಯ ತುಂಬೆಲ್ಲಾ ಕೊಳೆ..!
ಹುಬ್ಬಳ್ಳಿ, ನವೆಂಬರ್ 06: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲ ಕೆರೆಯಂತಾಗುತ್ತವೆ. ಬಹುತೇಕ ಮನೆಗಳು ಜಲಾವೃತಗೊಂಡು ಜನರು ಪರದಾಡುವಂತಾಗುತ್ತದೆ.
ಇಂದು(ನವೆಂಬರ್ 06) ಸಂಜೆ ವೇಳೆಗೆ ಏಕಾಏಕಿ ಮಳೆಯಾಗಿದ್ದು, ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಶಾಲಾ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡುಡುವ ಮೂಲಕ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇಸಾಮಾನ್ಯವಾಗಿದೆ.

ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ಮಾಡುವಂತಾಗಿದೆ. ಯುಜಿಡಿ ಸಮಸ್ಯೆಯಿಂದ ಇಲ್ಲಿನ ಜನರ ಭವಣೆ ಹೇಳತೀರದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಕಷ್ಟವನ್ನು ದೂರ ಮಾಡಬೇಕಿದೆ.
ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಪವನ ಸ್ಕೂಲ್ ಮಳೆ ನೀರಿನಿಂದ ಜಲಾವೃತವಾಗಿದ್ದು, ರಸ್ತೆ ಸಂಪರ್ಕ ಬಂದ್ ಆಗಿದೆ. ಸತತವಾಗಿ 3 ಘಂಟೆಗಳ ಕಾಲ ಮಳೆ ಸುರಿದಿದ್ದು, ಮಳೆಗೆ ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಇರುವ ಪವನ ಸ್ಕೂಲ್ ಶಾಲೆಯ ಮಕ್ಕಳು ಪರದಾಡುವಂತಾಗಿದೆ.

ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಏಕಾಏಕಿ ಧಾರಾಕಾರ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಆಗಾಗ ಮಳೆಯಾಗುತ್ತಿದ್ದು, ಇಂದು ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ರಾಜಧಾನಿಯ ಹಲವೆಡೆ ಮಳೆಯಾಗಿದೆ. ಪರಿಣಾಮ ರಸ್ತೆಗಳಿಗೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ನಿನ್ನೆಯಿಂದ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಹಲವೆಡೆ, ಕರಾವಳಿಯ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ ಜಿಲ್ಲೆಯ ಕೆಲವು ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.












Click it and Unblock the Notifications