ಶಿಗ್ಗಾವಿ: ಕೊರೊನಾಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಸತ್ತವರೇ ಹೆಚ್ಚು: ಸಚಿವರ ಗಂಭೀರ ಆರೋಪ
ಹುಬ್ಬಳ್ಳಿ, ನವೆಂಬರ್ 03: ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ವಿಚಾರ ಸಂಬಂಧ ಕಾಂಗ್ರೆಸ್ ನವರು ಹಣ, ಹೆಂಡದ ಹೊಳೆ ಹರಿಸುತ್ತಾರೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಗರಂ ಆಗಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಅಭಿವೃದ್ಧಿ ಮಾಡಿಲ್ಲ. ಆದರೆ ಕೊರೋನಾ ನೆಪದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಕೊರೊನಾಗಿಂತ ಅವರ ಭ್ರಹ್ಮಾಂಡ ಭ್ರಷ್ಟಾಚಾರದಿಂದ ಸತ್ತವರೆ ಹೆಚ್ಚು ಮಂದಿ ಎಂದು ಅವರು ಕುಟುಕಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಕೊರೋನಾ ಬಂದಾಗ ಕಾಳಸಂತೆಯಲ್ಲಿ ಇಂಜೆಕ್ಷನ್ ಮಾರಾಟ ಮಾಡಿದರು. ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ತನ್ನ ಕಾಲದಲ್ಲಿ ಮಾಡಿದ ಕೋವಿಡ್ ಹಗರಣದಿಂದಲೇ ರಾಜ್ಯದಲ್ಲಿ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಕೊರೋನಾ ಸಾಂಕ್ರಾಮಿಕಗಿಂತ ಬಿಜೆಪಿ ಮಾಡಿದ ಭ್ರಷ್ಟಾಚಾರದಿಂದಲೇ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ.
ಅಭಿವೃದ್ಧಿ v/s ಭ್ರಷ್ಟಾಚಾರದ ಮಧ್ಯೆ ಉಪಚುನಾವಣೆ
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸುತ್ತಿದೆ ಎಂಬ ಬಿಜೆಪಿಯವರ ಆರೋಪ, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಾಡಿಲ್ಲ. ನಾವು ಅಭಿವೃದ್ಧಿ ಮೂಲಕ ಮತ ಕೇಳುತ್ತಿದ್ದೇವೆ. ಈ ಬಾರಿ ಶಿಗ್ಗಾವಿಯಲ್ಲಿ ಅಭಿವೃದ್ಧಿ v/s ಭ್ರಷ್ಟಾಚಾರದ ನಡುವೆ ಉಪಚುನಾವಣೆ ನಡೆಯುತ್ತಿದೆ. ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಗ್ಗಾಂವಿ ಚುನಾವಣೆ ವಿಚಾರವಾಗಿ ಮೂರು ಉಸ್ತುವಾರಿಗಳ ಪ್ರಮುಖ ಮುಖಂಡರ ಸಭೆ ನಡೆಸಲಾಗಿದೆ. ಒಟ್ಟು ಆರು ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಮೂರು ಪುರಸಭೆಗಳಿಗೆ ಸಚಿವರನ್ನ ನೇಮಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲರಲ್ಲೂ ಹುಮ್ಮಸ್ಸು ಹಾಗೂ ಒಗ್ಗಟ್ಟಿದೆ. ಇದರೊಂದಿಗೆ ನಾವು ಉಪಚುನಾವಣೆ ಎದುರಿಸುತ್ತಿದ್ದೇವೆ.
ಬೊಮ್ಮಾಯಿಯಿಂದಲೂ ಶಿಗ್ಗಾವಿ ಅಭಿವೃದ್ಧಿ ಶೂನ್ಯ
ಈ ಉಪಚುನಾವಣೆ ಅಭಿವೃದ್ದಿ ಮತ್ತು ಅಭಿವೃದ್ದಿ ಶೂನ್ಯದ ನಡುವೆ ನಡೆಯುತ್ತಿದೆ. ಬಿಜೆಪಿ ಸೋಲಿಸಬೇಕು ಕಾಂಗ್ರೆಸ್ ಗೆಲ್ಲಲೇಬೇಕುಎಂಬ ಸಂಕಲ್ಪದಿಂದ ಚುನಾವಣೆಗೆ ನಾವೆಲ್ಲರು ಒಗ್ಗಟ್ಟಾಗಿದ್ದೇವೆ ಎಂದರು.
ಇನ್ನೂ ಶಿಗ್ಗಾವಿ ಕ್ಷೇತ್ರದಲ್ಲಿ ಈವರೆಗೂ ಯಾವುದೇ ಅಭಿವೃದ್ದಿ ಕಾರ್ಯಗಳಾಗಿಲ್ಲ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ, ವಚನ ಭ್ರಷ್ಟರಾದ ಅವರ ಮುಂದೆ ನಾವು ಕಾಂಗ್ರೆಸ್‌ನವರು ನುಡಿದಂತೆ ನಡೆದಿದ್ದೇವೆ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.
ವಕ್ಫ್: ರೈತರಿಗೆ ನೋಟಿಸ್ ವಿಚಾರದಲ್ಲಿ ಬಿಜೆಪಿ ಪಾಲಿದೆ
ಇನ್ನೂ ಹುಬ್ಬಳ್ಳಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು, ವಕ್ಫ್ ಗೆಜೆಟ್ ನೋಟಿಫಿ ಕೇಶನ್ ಮಾಡಿರುವುದರಲ್ಲಿ ಬಿಜೆಪಿ ಪಾಲಿದೆ. ಅವರೇ ನೋಟಿಸ್ ಕೊಟ್ಟು ನಾಟಕ ಮಾಡುತ್ತಿದ್ದಾರೆ ಎಂದರು.
ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ನಾಟಕ ಮಾಡುತ್ತಿದ್ದಾರೆ. ಇದು ಕಪಟ ರಾಜಕೀಯ ನಾಟಕ. ಈ ವಿಚಾರವಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಹಿಂದೂ ರೈತರು ಅಲ್ಲ, ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದರು.












Click it and Unblock the Notifications