ನನಗೆ ಟಿಕೆಟ್ ಸಿಗುವುದು ಖಚಿತ, ಕಾದು ನೋಡಿ-ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್ 14: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ತಮಗೆ ಟಿಕೆಟ್ ಸಿಗುವುದು ಖಚಿತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದು, ನನಗೆ ಟಿಕೆಟ್ ಸಿಗುತ್ತದೆ ನೋಡಿ. ನಾನು ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ನನ್ನ ಮಗನ ಹೆಸರು ಕೂಡ ಹೇಳಿಲ್ಲ ಎಂದಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಜೊತೆ ಸುದೀರ್ಘ ಸಭೆ ಆಗಿದೆ. ನಡ್ಡಾ ಅವರ ಜೊತೆ ಮಾತ್ರ ಸಭೆ ಸಕರಾತ್ಮಕವಾಗಿ ಆಗಿದ್ದು, ನನ್ನ ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹೇಳಿದ್ದೇನೆ. ಎರಡು ದಿನ ಕಾದು ನೋಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ದೆಹಲಿಗೆ ತೆರಳಿದ ಬಳಿಕ ಯಡಿಯೂರಪ್ಪ ಅವರಿಗೆ ಭೇಟಿ ಮಾಡಿದ್ದೇನೆ. ಯಡಿಯೂರಪ್ಪ ಕೂಡಾ ಶೆಟ್ಟರ್‌ಗೆ ಟಿಕೆಟ್ ಕೊಡಬೇಕು ಎಂದಿದ್ದಾರೆ. ಯಡಿಯೂರಪ್ಪ ಅವರು, ಅಮಿತ್ ಶಾ ಹಾಗೂ ಜೆ.ಪಿ ನಡ್ಡಾ ಜೊತೆ ಮಾತಾಡಿದ್ದಾರೆ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಸಿಗದೆ ಹೋದರೆ, ಉತ್ತರ ಕರ್ನಾಟಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದರು.
ತಮಗೆ ಟಿಕೆಟ್ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನ ಮಾಡುತ್ತೀದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ನಾನು ಯಾರ ಬಗ್ಗೆನೂ ಕಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹೆಸರು ಬರದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, ಬುಧವಾರ ಸಂಜೆಯವರೆಗೂ ಸಭೆ ನಡೆದಿದೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಹೆಸರಿಲ್ಲ. ಅದು ಸಹಜ ಅದರಲ್ಲಿ ವಿಶೇಷ ಇಲ್ಲ. ಆದರೆ ನನಗೆ ಟಿಕೆಟ್ ಸಿಗುತ್ತದೆ ನೋಡಿ ನೀವು ಎಂದು ಭರವಸೆ ವ್ಯಕ್ತಪಡಿಸಿದರು.

ನಮ್ಮ ಸಮಾಜದವರು ಸಿಎಂ ಆಗಬೇಕು: ಜಯ ಮೃತ್ಯುಂಜಯ ಸ್ವಾಮೀಜಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕಾರಣ ವಿಚಾರ, ನಾನು ಈ ಬಗ್ಗೆ ಬಹಳ ಗಮನ ಕೊಟ್ಟಿಲ್ಲ. ಸಮಾಜಕ್ಕೆ ಸಮನಾಗಿ ಹಂಚಿಕೆ ಆಗಬೇಕು. ನನಗೂ ಬಹಳ ಜನ ಈ ಪ್ರಶ್ನೆ ಮಾಡಿದ್ದಾರೆ ಎಂದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಕೆಲ ಕಡೆ ವ್ಯತ್ಯಾಸ ಆಗಿವೆ. ಸಿ.ಎಂ. ನಿಂಬಣ್ಣವರ ಇರಬಹುದು, ಬೆಳಗಾವಿ ಜಿಲ್ಲೆಯಲ್ಲಿ ವಿಶ್ವನಾಥ್ ಪಾಟೀಲ್ ಇರಬಹುದು. ಹೀಗಾದಾಗ ಆಯಾ ಸಮಾಜದ ಸ್ವಾಮೀಜಿಗಳಿಗೆ ನೋವಾಗೋದು ಸಹಜ ಎಂದು ಅವರು ಹೇಳಿದರು.
ಕೆಲ ಕಡೆ ನಮ್ಮ ಸಮಾಜದ ಯುವ ನಾಯಕರಿಗೆ ಅವಕಾಶ ಸಿಕ್ಕದೆ. ಎರಡು ರಾಷ್ಟ್ರೀಯ ಪಕ್ಷಗಳು, ವ್ಯತ್ಯಾಸ ಆಗಿದ್ದರೆ ಪುನರ್ ಪರಿಶೀಲನೆ ಮಾಡಬೇಕು. ಮೀಸಲಾತಿ ವಿಚಾರ ಒಂದು ಹಂತದ ಸಮಾಧಾನ ತಂದಿದೆ. ಸದ್ಯದ ಪರಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಪಡೆದುಕೊಂಡಿವೆ. ಮೊದಲ ಹಂತದ ಜಯ ಪಡೆದುಕೊಂಡಿದ್ದೇವೆ. ಸದ್ಯ ಯಾವದೇ ತೊಡಕಿಲ್ಲದೆ ಒಂದು ಮೆಟ್ಟಿಲು ಹತ್ತಿದ್ದೇವೆ. ನಮ್ಮದು ಬಸವಣ್ಣನ ತತ್ವ. ಯಾರೇ ಬಂದರೂ ನಮ್ಮವರು ಎಂದು ಹೇಳಿದರು.
ಮುಂದಿನ ಬಾರಿ ನಮ್ಮ ಸಮಾಜದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಭಾವನೆ. ಮುಖ್ಯಮಂತ್ರಿ ಮಾಡುವುದು ಆಯಾ ಪಕ್ಷದ ನಿಲುವು. ನಮ್ಮವರು ಆಗಲಿ ಎಂದು ನಾವು ಬಯಸುವುದು ಸಹಜ ಎಂದ ಸ್ವಾಮೀಜಿ, ನಮ್ಮ ಸಮುದಾಯದ ಎರಡು ವರ್ಷದ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ಅವಕಾಶ ಮಾಡುತ್ತೇನೆ ಎಂದರು.












Click it and Unblock the Notifications