Jagadish Shettar vs BL Santhosh: ಬಿಜೆಪಿ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಹಾಕಿದ ಸವಾಲು ಏನು?, ಇಲ್ಲಿದೆ ವಿವರ
ಹುಬ್ಬಳ್ಳಿ, ಏಪ್ರಿಲ್, 28: ಜಗದೀಶ್ ಶೆಟ್ಟರ್ ಮುಖ ನೋಡಿ ವೋಟ್ ಹಾಕುತ್ತೇವೆ ಅನ್ನುವ ಭಾವನೆ ಜನರಲ್ಲಿ ಬರುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಚಾಲೆಂಜ್ ಅನ್ನು ಜನರೇ ಸ್ವೀಕರಿಸುತ್ತಿದ್ದಾರೆ. ಎಲ್ಲರೂ ನಮ್ಮನ್ನು ಗೆಲ್ಲಿಸಿ ಅಂತಾ ಕ್ಯಾಂಪೇನ್ ಮಾಡಿದರೆ, ಬಿಜೆಪಿಯವರು ಶೆಟ್ಟರ್ ಸೋಲಿಸಿ ಅಂತಾ ಕ್ಯಾಂಪೇನ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಮೂಡಿದೆ. ಪಕ್ಷ ಬಿಟ್ಟು ಹೊರಗೆ ಹೋದಮೇಲೆ ಶೆಟ್ಟರ್ ಶಕ್ತಿ ಏನಂತಾ ಗೊತ್ತಾಗಿದೆ. ಹೀಗಾಗಿ ಅವರಿಗೆ ತಳಮಳ ಶುರುವಾಗಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಮಾಡಿದರು. ಪ್ರತಿದಿನ ಒಬ್ಬರು ಬಂದು ಪ್ರಚಾರ ಮಾಡಿ, ಸುತ್ತಾಡಿ ಹೋಗುತ್ತಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿಂತೆಯಿಲ್ಲ, ಕೇವಲ ನನ್ನನ್ನು ಸೋಲಿಸಲು ಪ್ರಯತ್ನ ನಡೆಸುತ್ತಿದ್ದಾರೆ ಬಿಜೆಪಿ ವಿರುದ್ಧ ಹರಿಹಾಯ್ದರು.

ಕೇಂದ್ರ ಮಂತ್ರಿಗಳು ಎಲ್ಲಾ ಕಾರ್ಪೋರೇಟರ್‌ಗಳ ಮೇಲೆ ನಿಗಾ ಇಟ್ಟಿದ್ದಾರೆ. ಪ್ರತಿ ಚಲನವಲನದ ಮೇಲೆ ನಿಗಾ ಇಟ್ಟು ಕಾಯುತ್ತಿದ್ದಾರೆ. ಅಲ್ಲದೆ ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕಾರ್ಪೊರೇಟರ್‌ಗಳಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ದ ವಾಗ್ದಾಳಿ ನಡೆಸಿದರು.
ಬಿ.ಎಲ್.ಸಂತೋಷ್‌ಗೆ ಡೈರೆಕ್ಟ್ ಫೈಟ್ ಮಾಡುವ ಸ್ವಭಾವವಿಲ್ಲ. ಹಿಂಬಾಗಿಲ ರಾಜಕೀಯ ಮಾಡುವುದೇ ಅವರ ಸ್ವಭಾವ ಆಗಿದೆ. ಅವರ ಬಗ್ಗೆ ರಾಷ್ಟ್ರದಲ್ಲಿ ಮೊದಲು ಧ್ವನಿ ಎತ್ತಿದವನೇ ನಾನು. ಆದ್ದರಿಂದ ನನಗೆ ಬಹಳಷ್ಟು ಜನ ಫೋನ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಯಾವುದೇ ಲಾಬಿ ಮಾಡಿ, ಕೈಕಾಲು ಹಿಡಿದು ರಾಜಕೀಯ ಮಾಡಿದವನು ನಾನಲ್ಲ ಎಂದರು.
ಬಿ.ಎಲ್. ಸಂತೋಷ್ ಅವರೇ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ಕೈತಪ್ಪಿಸಿದ್ದರು. ಲಿಂಗಾಯತ ಲೀಡರ್‌ಶಿಪ್ ಇಲ್ಲದೆ ಸರ್ಕಾರ ಮಾಡುತ್ತೇವೆ ಅಂತಾ ಹೊರಟಿದ್ದಾರೆ. ಈಶ್ವರಪ್ಪ, ಯಡಿಯೂರಪ್ಪ ಯಾರೇ ನನಗೆ ಬೈದರೂ ಆಶಿರ್ವಾದ ಅಂತಾ ತೆಗೆದುಕೊಳ್ಳುತ್ತೇನೆ. ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವುದನ್ನು ಮೊದಲು ಅವರು ಬಿಡಲಿ. ನೇರವಾಗಿ ನನ್ನ ಜೊತೆ ಯುದ್ಧಕ್ಕೆ ಬರಲಿ ಎಂದು ಬಿ.ಎಲ್.ಸಂತೋಷಗೆ ಸವಾಲು ಹಾಕಿದರು.
ನಾನು ಪಕ್ಷದಿಂದ ಹೊರಗೆ ಹೋದರೆ ಐಡಿಯಾಲಜಿ ನೆನಪಾಗಿದೆ. ಕಾಂಗ್ರೆಸ್‌ನವರನ್ನು ಕರೆತಂದು ಸರ್ಕಾರ ಮಾಡಿದಾಗ ಇವರ ಐಡಿಯಾಲಜಿ ಎಲ್ಲಿ ಹೋಗಿತ್ತು? ಕಾಂಗ್ರೆಸ್ ಐಡಿಯಾಲಜಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುತ್ತಿರುವ ಬಿಜೆಪಿಯಲ್ಲಿ ಯಾವುದೇ ಐಡಿಯಾಲಜಿ ಉಳಿದಿಲ್ಲ. ಬಿಜೆಪಿ ನನಗೆ ಟೀಕಿಸಿದಷ್ಟು ನಾನು ಜಯದ ಹತ್ತಿರ ಹೋಗುತ್ತೇನೆ. ನಾನು ಎಲ್ಲವನ್ನೂ ಫೇಸ್ ಮಾಡುತ್ತಿದ್ದೇನೆ. ಈ ಮೂಲಕ ಐತಿಹಾಸಿಕ ಗೆಲುವು ಸಾಧಿಸುತ್ತೇನೆ ಎಂದರು.












Click it and Unblock the Notifications