ಜನರು ಕೊಟ್ಟಿರುವ ತೀರ್ಪು ಸ್ವಾಗತಾರ್ಹ, ನಾವು ಸೋಲಿನ ಹೊಣೆ ಹೊರುತ್ತೇವೆ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, ಮೇ, 13: ಜನರು ಕೊಟ್ಟಿರುವ ತೀರ್ಪನ್ನು ನಾನು ಹಾಗೂ ನಮ್ಮ ಪಾರ್ಟಿ ವಿನಮ್ರವಾಗಿ ಸ್ವೀಕರಿಸುತ್ತೆವೆ. ವಿಧಾನಸಭಾ ಚುನಾವಣಾ ಫಲಿತಾಂಶದ ಸೋಲಿನ ಹೊಣೆಯನ್ನು ರಾಜ್ಯ ಬಿಜೆಪಿ ಘಟಕ ಹೊರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಹೇಳಿದರು.
ಪ್ರಲ್ಹಾದ್ ಜೋಶಿ ಅವರು ತಮ್ಮ ನಿವಾಸದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದ ಜನ ಕೊಟ್ಟ ತೀರ್ಪನ್ನು ನಾವು ವಿನಮ್ರವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸುತ್ತದೆ ಎಂದು ಭಾವಿಸುತ್ತೇನೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ ಎಂದರು.

ಬಿಜೆಪಿಯ ಈ ಸೋಲಿನ ಪರಾಮರ್ಶೆ ಮಾಡುತ್ತೇವೆ.
ಎಲ್ಲಿ ನಮ್ಮ ತಂತ್ರಗಾರಿಕೆ ತಪ್ಪಿದೆ ಎನ್ನುವುದನ್ನು ಗಂಭೀರವಾಗಿ ಅವಲೋಕನ ಮಾಡುತ್ತೇವೆ. 2013 ರಲ್ಲಿಯೂ ನಾವು ಹೀನಾಯ ಸೋಲು ಅನುಭವಿಸುದ್ದೆವು. 2013 ರ ನಂತರ ನಾವು ಚುನಾವಣೆಯಲ್ಲಿ ಉತ್ತಮ ಸ್ಪರ್ಧೆ ಮಾಡಿದ್ದೆವು. ಈ ಸೋಲನ್ನು ನಾವು ತುಂಬ ಸವಾಲಾಗಿ ಸ್ವೀಕರಿಸುತ್ತೇವೆ. ಸೋಲಿನ ಪರಾಮರ್ಶೆ ಮಾಡುವ ಮೂಲಕ ಕಾರಣವನ್ನು ಕಂಡುಕೊಳ್ಳಲಿದ್ದೇವೆ ಎಂದು ಹೇಳಿದರು.
ಪಕ್ಷವನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ಮೇಲುನೋಟಕ್ಕೆ ನಮ್ಮ ವಿರೋಧಿ ಅಲೆಯೇ ನಮಗೆ ಕಾರಣವಾಗಲಿದೆ. ಸೋಲಿನ ಹೊಣೆಯನ್ನು ನಾವೆಲ್ಲರೂ ಹೊರಲು ಸಿದ್ಧರಿದ್ದೇವೆ. ಗುಜರಾತ್ ಮಾದರಿಯಲ್ಲಿ ನಾವು ಚುನಾವಣೆ ನಡೆಸಲಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೂ ಹಿರಿಯರನ್ನು ಕಡೆಗಣಿಸಿದ್ದೇವೆ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈ ಚುನಾವಣೆ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನದಲ್ಲಿ ನಾವು ಜಯಗಳಿಸಿದ್ದೇವೆ. ಲಿಂಗಾಯತ ನಾಯಕರಿಗೆ ನಾವು ಟಿಕೆಟ್ ಕೊಟ್ಟಷ್ಟು ಯಾರೂ ಕೊಟ್ಟಿಲ್ಲ. ಯಡಿಯೂರಪ್ಪನವರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಚುನಾವಣೆ ಮಾಡಿದ್ದಾರೆ ಎಂದರು.
ಶೆಟ್ಟರ್ ಸೋಲು ಅನ್ನೋದಕ್ಕಿಂತ ಬಿಜೆಪಿ ಗೆಲುವು ಸಾಧಿಸಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದರು.












Click it and Unblock the Notifications