ಬಿಜೆಪಿಯ ಮೀಸಲಾತಿ ಹೆಚ್ಚಳ ವಿಚಾರ ಕ್ರಾಂತಿಕಾರಿ ನಿರ್ಣಯ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್. 06: ರಾಜ್ಯ ಸಚಿವ ಸಂಪುಟವು ಕಳೆದ ತಿಂಗಳು ರಾಜ್ಯದಲ್ಲಿ ಪ್ರಬಲ ಸಮುದಾಯಗಳಾದ ಲಿಂಗಾಯಿತ ಮತ್ತು ಒಕ್ಕಲಿಗರ ಮೀಸಲಾತಿ ಹೆಚ್ಚಿಸಿದೆ. ಜೊತೆಗೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಗೆ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದೆ. ಹೀಗಾಗಿ ಇದು ರಾಜ್ಯ ಸರ್ಕಾರದ ಕ್ರಾಂತಿಕಾರಿ ನಿರ್ಣಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹಾಗೂ ಒಳ ಮೀಸಲಾತಿ ಹೆಚ್ಚಿಸಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸಲು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗುರುವಾರ ಪಾಲ್ಗೊಂಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ರಾಜ್ಯ ಸರ್ಕಾರ ಸಮುದಾಯಗಳ ಮೀಸಲಾತಿ ಹೆಚ್ಚಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರಕ್ಕೆ ಸಮಾಜದ ಪ್ರತಿ ವ್ಯಕ್ತಿಯ ಕಲ್ಯಾಣವೂ ಮುಖ್ಯ. ಶ್ರೇಷ್ಠ ಭಾರತದ ನಿರ್ಮಾಣ ಎಂಬುದು ಸರ್ವರಿಗೂ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ದೊರೆತಾಗ ಮಾತ್ರ ಸಾಧ್ಯ. ಅದೇ ಉದ್ದೇಶದಿಂದಲೇ ಈ ಕ್ರಾಂತಿಕಾರಿ ನಿರ್ಣಯವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದ್ದು, ರಾಜ್ಯದ ಪ್ರತಿ ವ್ಯಕ್ತಿಯ ಶ್ರೇಯಸ್ಸು ಬಿಜೆಪಿಯ ಗುರಿಯಾಗಿದೆ ಎಂದು ಹೇಳಿದ್ದಾರೆ.
ಮುಂದುವರಿದು, ಆದರೆ, ಕಾಂಗ್ರೆಸ್ ಮಾತಿಗೂ ಕೃತಿಗೂ ವ್ಯತ್ಯಾಸವಿದೆ. ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು, ಜಾತಿ ವಿಷ ಬೀಜ ಬಿತ್ತಲು ಮುಂದಾದರೆ ಹೊರೆತು, ಮೀಸಲಾತಿ ಹೆಚ್ಚಿಸುವ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೋರಿಸಲಿಲ್ಲ ಎಂದು ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಯಾರಿಗೂ, ಯಾವ ಸಮುದಾಯದಕ್ಕೂ ಅನ್ಯಾಯ ಮಾಡಿಲ್ಲ. ಎಲ್ಲ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಒಳ ಮೀಸಲಾತಿ ಹೆಚ್ಚಿಸಲಾಗಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಬಿಜೆಪಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೀತಿಯನ್ನ ತೋರ್ಪಡಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಸಿಗೆ ಇರಲಿಲ್ಲ. ಕಾಂಗ್ರೆಸ್‌ನವರದ್ದು ಕೇವಲ ಡೋಂಗಿತನ. ಕಾಂಗ್ರೆಸ್ ಮಾಡದೇ ಇರುವುದನ್ನು ಬಿಜೆಪಿ ಮಾಡಿ ತೋರಿಸಿದೆ. ಕಾಂಗ್ರೆಸ್‌ನವರು ಇಷ್ಟು ದಿನದ ದೀನದಲಿತರನ್ನು ಚುನಾವಣಾ ಮತ ಬ್ಯಾಂಕ್‌ಗಳಾಗಿ ಮಾಡಿಕೊಂಡಿದ್ದರು. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, " ಹಲವಾರು ದಶಕಗಳ ಕಾಲ ನಿರಂತರವಾಗಿ ಅನ್ಯಾಯಕ್ಕೊಳಗಾಗಿದ್ದ ಸಮುದಾಯಗಳ ಬೇಡಿಕೆಯನ್ನು ಈಡೇರಿಸಿದ ಧನ್ಯತಾಭಾವ ನನ್ನದಾಗಿತ್ತು, ನೆರೆದಿದ್ದವರ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ಕಂಡ ಹೊಸ ಆತ್ಮವಿಶ್ವಾಸ, ಸಮಗ್ರ ಸಾಮಾಜಿಕ ನ್ಯಾಯದಡಿ ನವ ಕರ್ನಾಟಕ ನಿರ್ಮಾಣದ ಭರವಸೆಯನ್ನು ಮೂಡಿಸಿತು" ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಶಂಕರ ಪಾಟೀಲ ಮುನೇನಕೊಪ್ಪ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.












Click it and Unblock the Notifications