ರೋಡ್ ಶೋಗೆ ಉತ್ತಮ ಜನಬೆಂಬಲ ವ್ಯಕ್ತ, ರಾಜ್ಯದ ತುಂಬಾ ಬಿಜೆಪಿ ಅಲೆ ಇರುವುದಕ್ಕ ಇದೇ ಸಾಕ್ಷಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಏಪ್ರಿಲ್, 25: ಇಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಅವರನ್ನು ದಿಢೀರ್ ಭೇಟಿ ಆಗಿದ್ದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಯವಾಹಿನಿ ರೋಡ್ ಶೋ ಕಾರ್ಯಕ್ರಮಕ್ಕೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಜನರ ಉತ್ಸಾಹ ನೋಡಿದರೆ ಬಿಜೆಪಿ ಅಲೆ ರಾಜ್ಯದ ತುಂಬಾ ಇರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಬಂದಮೇಲೆ ರಾಜ್ಯ ಸಂಪೂರ್ಣ ಬಿಜೆಪಿಮಯ ಆಗುವುದರಲ್ಲಿ ಸಂಶಯವಿಲ್ಲ. ಅಮಿತ್ ಶಾ ಅವರು ಚುನಾವಣಾ ವಿಚಾರವಾಗಿ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರು ಪ್ರಧಾನಿಯಿಂದ ಹಿಡಿದು ಪ್ರಮುಖರ ಕಾರ್ಯಕ್ರಮಗಳ ಮರು ಅವಲೋಕನ ಮಾಡಲು ಹೇಳಿದ್ದಾರೆ ಎಂದರು.

ಅಲ್ಲದೆ ಕೆಲವು ಕಾರ್ಯಕ್ರಮ ಓವರ್ ಲ್ಯಾಪ್ ಆಗುತ್ತಿದ್ದು, ಇಂದು ರಾತ್ರಿ ಇದನ್ನು ಪರಿಶೀಲಿಸುತ್ತೇನೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದ್ದರಿಂದ ನನ್ನ ಮೇಲೆ ಒಂದು ಆರೋಪ ಮಾಡಿ, ಅದನ್ನು ಸಾಬೀತುಮಾಡಲಿ ಎಂದು ಅವರಿಗೆ ಚಾಲೆಂಜ್ ಮಾಡಿದ್ದೇನೆ. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿರುವುದು ಜನರಿಗೆ ಗೊತ್ತಿದೆ.
ಸಿದ್ಧರಾಮಯ್ಯ ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅವರ ಮೇಲಿನ ಪ್ರಕರಣಗಳ ಕುರಿತು ಲೋಕಾಯುಕ್ತ ತನಿಖೆಗೆ ಸಹ ನಿಡಲಾಗಿದೆ. ನನ್ನ ಮೇಲೆ ಮಾಡಿರುವ ಆರೋಪವನ್ನು ಸಿದ್ಧರಾಮಯ್ಯ ಅವರು ಸಾಬೀತು ಮಾಡಲಿ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದ ಅವಿಭಾಜ್ಯ ಅಂಗ ಕಾಂಗ್ರೆಸ್, ಅವರ ಎಷ್ಟು ಜನ ನಾಯಕರು ಜೈಲಿಗೆ ಹೋಗಿದ್ದಾರೆ, ಅವರೆಲ್ಲ ಬೇಲಿನ ಮೇಲೆ ಹೊರಗಡೆ ಬಂದಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಹೇಳುವ ಮೂಲಕ ತಿವಿದರು.
ಅಮಿಶ್ ಶಾ ಭೇಟಿಗೆ ಬಂತು ಬಿಜೆಪಿ ನಾಯಕರ ದಂಡು
ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುವ ಭಾರತೀಯ ಜನತಾ ಪಾರ್ಟಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಭದ್ರಪಡಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ರಾಜ್ಯ ನಾಯಕರ ತಂಡ ಹುಬ್ಬಳ್ಳಿಗೆ ಲಗ್ಗೆ ಇಟ್ಟಿತ್ತು.
ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ಗೆ ಆಗಮಿಸಿದ್ದಾರೆ.ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ತಂಗಿರುವ ಅಮಿತ್ ಶಾ ಅವರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಸಾಧ್ಯತೆ ದಟ್ಟವಾಗಿದೆ.
ಇನ್ನೂ ಬೆಳಿಗ್ಗೆಯಿಂದಲೂ ಕೇಂದ್ರ ಸಚಿವ ಅಮಿತ್ ಶಾ ಅವರು ಕಾರ್ಯಕರ್ತರ ಹಾಗೂ ನಾಯಕರ ಜೊತೆಗೆ ಗೌಪ್ಯ ಸಭೆ ನಡೆಸುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ಪ್ರಮುಖರ ಸಭೆಯಲ್ಲಿ ಭಾಗಿ ಆಗಿದ್ದಾರೆ.
ಜಗದೀಶ್ ಶೆಟ್ಟರ್ ಮಣಿಸಲು ಪ್ಲಾನ್
ಇನ್ನು ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿನ ಬಿಜೆಪಿಯನ್ನು ಭದ್ರಪಡಿಸುವ ಉದ್ದೇಶದಿಂದ ಅಮಿತ್ ಶಾ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ. ಹಾಗೆಯೆ ಈ ಮೂಲಕ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಮಣಿಸಲು ಸಭೆಯಲ್ಲಿ ರಣತಂತ್ರ ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಕುರಿತು ಸಭೆಯನ್ನು ಮಾಡಲಾಗಿದ್ದು, ಹಾಗೆಯೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಗೊಳಿಸುವ ಬಗ್ಗೆಯೂ ಚರ್ಚೆ ಮಾಡಲಾಯಿತು. ಇತ್ತೀಚೆಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್‌ಗೆ ಠಕ್ಕರ್ ಕೊಡಲು ಬಿಜೆಪಿ ರಣತಂತ್ರ ರೂಪಿಸಿದ್ದು, ಈ ಬಗ್ಗೆ ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಜೆಪಿ ಮತಗಳನ್ನು ಭದ್ರಪಡಿಸುವುದರ ಜೊತೆಗೆ ಇನ್ನುಳಿದ ಮತಗಳನ್ನು ಸೆಳೆಯುವ ಬಗ್ಗೆ ಚುನಾವಣಾ ಚಾಣಕ್ಯ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಬಿಜೆಪಿ ಬಾವುಟವನ್ನು ಮತ್ತಷ್ಟು ರಾರಾಜಿಸುವಂತೆ ಮಾಡಲು ಕಾರ್ಯಕರ್ತರು ಹಾಗೂ ನಾಯಕರು ಶ್ರಮಿಸುತ್ತಿದ್ದು, ಇಂತಹದೊಂದು ಮಹತ್ವದ ಸಭೆಗೆ ಶಾಸಕ ಅರವಿಂದ ಬೆಲ್ಲದ್, ಅಮೃತ್ ದೇಸಾಯಿ, ಸಚಿವ ಶಂಕತ್ ಪಾಟೀಲ ಮುನೇನಕೊಪ್ಪ ಸಾಥ್ ನೀಡಿದ್ದಾರೆ.












Click it and Unblock the Notifications