ರಕ್ತದಲ್ಲಿ ಪತ್ರ ಬರೆದ ಪಕ್ಷದ ಕಾರ್ಯಕರ್ತನ ಭೇಟಿ ಮಾಡಿದ ಜಗದೀಶ್ ಶೆಟ್ಟರ್- 'ರಕ್ತದಾನ ಶ್ರೇಷ್ಠದಾನ' ಎಂದ ಮಾಜಿ ಸಿಎಂ
ಹುಬ್ಬಳ್ಳಿ, ಏಪ್ರಿಲ್ 28: ಬಿಜೆಪಿಯ ಮಾಜಿ ನಾಯಕ ಮತ್ತು ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಶುಕ್ರವಾರ ಪಕ್ಷದ ಕಾರ್ಯಕರ್ತನ ಮನೆಗೆ ಭೇಟಿ ನೀಡಿದರು. ಮಂಜುನಾಥ್ ಎಂಬುವ ಕಾಂಗ್ರೆಸ್ ಕಾರ್ಯಕರ್ತ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದರು. ಈತನ ಮನೆಗೆ ತೆರಳಿ ಭೇಟಿ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾರ್ಯಕರ್ತನನ್ನು ಅಭಿನಂದಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮಂಜುನಾಥ್ ತಮ್ಮ ರಕ್ತದಿಂದ ಪತ್ರ ಬರೆದಿದ್ದರು. 'ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆಲುವು 100 ಪ್ರತಿಶತ ಖಚಿತ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ' ಎಂದು ಪಕ್ಷದ ಕಾರ್ಯಕರ್ತ ರಕ್ತದಿಂದ ಪತ್ರ ಬರೆದಿದ್ದಾರೆ. ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿಯಲ್ಲಿರುವ ಮಂಜುನಾಥ್ ಮನೆಗೆ ಭೇಟಿ ನೀಡಿ ಅಭಿನಂದಿಸಿದರು.

ಮಂಜುನಾಥ್ ಅವರನ್ನು ಭೇಟಿ ಮಾಡಿದ ನಂತರ ಟ್ವಿಟರ್‌ನಲ್ಲಿ ಫೋಟೊಗಳನ್ನು ಜಗದೀಶ್ ಶೆಟ್ಟರ್ ಹಂಚಿಕೊಂಡಿದ್ದಾರೆ. ರಕ್ತವನ್ನು ವ್ಯರ್ಥ ಮಾಡಬೇಡಿ, ಆದರೆ ಅಗತ್ಯವಿರುವವರಿಗೆ ದಾನ ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕೇಳಿಕೊಂಡಿದ್ದಾರೆ. ಮಂಜುನಾಥ್ ಅವರಂತಹ ಪಕ್ಷದ ಕಾರ್ಯಕರ್ತರೇ ತಮ್ಮ ಚುನಾವಣಾ ಗೆಲುವಿಗೆ ಕಾರಣ ಎಂದರು.
'ರಕ್ತದಾನ ಶ್ರೇಷ್ಠದಾನ ಯಾರು ಸಹ ರಕ್ತವನ್ನು ವ್ಯರ್ಥ ಮಾಡಬೇಡಿ ಅವಶ್ಯಕತೆ ಇರುವವರಿಗೆ ದಾನ ಮಾಡಿ. ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂದು ತಮ್ಮ ರಕ್ತದಲ್ಲಿ ಬರೆದು ದಿಟ್ಟ ಉತ್ತರವನ್ನು ನೀಡಿದಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶ್ರೀ ಮಂಜುನಾಥ ಯಂಟ್ರುವಿ ಅವರನ್ನು ಇಂದು ಆತ್ಮೀಯವಾಗಿ ಸನ್ಮಾನಿಸಲಾಯಿತು' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

'ಇಂತಹ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ನನ್ನ ಗೆಲುವಿಗೆ ಮುಖ್ಯ ಕಾರಣ.ಈ ಸಂದರ್ಭದಲ್ಲಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಜತ್ ಉಳ್ಳಾಗಡ್ಡಿಮಠ ಹಾಗೂ ಪಕ್ಷದ ಮುಖಂಡರು ಇದ್ದರು' ಎಂದು ಶೆಟ್ಟರ್ ತಿಳಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್ ಗೆಲ್ಲುವುದಿಲ್ಲ ಎಂದು ರಕ್ತದಲ್ಲಿ ಬರೆಯಲು ಸಿದ್ಧ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಗುರುವಾರ ಹೇಳಿದ್ದರು. ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಶೆಟ್ಟರ್ ಅವರು ಬಿಜೆಪಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಯಡಿಯೂರಪ್ಪ ಅವರಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದರು.
'ನಮ್ಮ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ, ಪಕ್ಷಕ್ಕೆ ಮೋಸ ಮಾಡಿದ್ದಾರೆ. ಅದಕ್ಕಾಗಿಯೇ ನಾನು ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಈ ಬಾರಿ ಆಯ್ಕೆ ಮಾಡಬಾರದು ಎಂದು ಹೇಳಿದ್ದೇನೆ. ಅವರು ಈ ಚುನಾವಣೆಯಲ್ಲಿ ಸೋಲುವುದು ನನಗೆ ಖಚಿತವಾಗಿದೆ, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಮಾಜಿ ಸಿಎಂ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಶೆಟ್ಟರ್ ಮತ್ತು ಕಾಂಗ್ರೆಸ್ ಇಬ್ಬರೂ ಗೆಲ್ಲುತ್ತಾರೆ ಎಂದು ರಕ್ತದಲ್ಲಿ ಬರೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡ ಜಿಲ್ಲಾ ಕಾಂಗ್ರೆಸ್‌ನ ಯುವ ಘಟಕದ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಯಂಟುವಿ ಶೆಟ್ಟರ್ ಅವರ ಬೆನ್ನಿಗೆ ಸಮುದಾಯ ಗಟ್ಟಿಯಾಗಿ ನಿಲ್ಲಲಿದ್ದು, ದಾಖಲೆಯ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೆಟ್ಟರ್ ಅವರನ್ನು ಪಕ್ಷ ತೊರೆಯುವಂತೆ ಮಾಡಿದ ದ್ರೋಹಕ್ಕೆ ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications