ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ ಭೇಟಿ
ಹುಬ್ಬಳ್ಳಿ ಏಪ್ರಿಲ್ 18: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ 4 ಗಂಟೆಗೆ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹುಬ್ಬಳ್ಳಿಯಲ್ಲಿ ಧಾರವಾಡ ವಿಭಾಗದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಜೆಪಿ ನಡ್ಡಾ ಭಾಗಿಯಾಗಲಿದ್ದಾರೆ. ಸಭೆಗೆ 800 ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.
ಮಂಗಳವಾ ರಾತ್ರಿ ಹುಬ್ಬಳ್ಳಿಯಲ್ಲಿ ನಡ್ಡಾ ವಾಸ್ತವ್ಯ ಹೂಡಲಿದ್ದು, ಬುಧವಾರ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ. ಬುಧವಾರ ಹುಬ್ಬಳ್ಳಿಯಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತ ಮುಖಂಡರನ್ನು ಕಡೆಗಣನೆ ಮಾಡಲಾಗಿದೆ ಎಂಬ ಸಂದೇಶವನ್ನು ಕಾಂಗ್ರೆಸ್ ರವಾನಿಸುತ್ತಿದೆ. ಶೆಟ್ಟರ್ ಕಾಂಗ್ರೆಸ್ ಸೇರಿದ್ದರಿಂದ ಲಿಂಗಾಯತ ಮತಗಳು ಕೈ ತಪ್ಪುವ ಆತಂಕ ಬಿಜೆಪಿಗೆ ಎದುರಾಗಿದೆ.ಈ ಹಿನ್ನೆಲೆ ಎಚ್ಚೆತ್ತಿರುವ ಬಿಜೆಪಿ ಲಿಂಗಾಯತ ಮುಖಂಡರ ಸಭೆ ನಡೆಸಲು ಮುಂದಾಗಿದೆ.

ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅತ್ಯಂತ ಹೆಚ್ಚು ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೆ ಬಿಜೆಪಿ ಅಲರ್ಟ್ ಆಗಿದೆ. ಬಿಜೆಪಿ ಪಾಲಿಗೆ ಭದ್ರ ಮತಬುಟ್ಟಿ ಎಂದೆನಿಸಿರುವ ಲಿಂಗಾಯತ ಸಮುದಾಯದ ಮತಗಳು ಹಂಚಿಹೋಗದಂತೆ ತಡೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾದ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿ- ಧಾರವಾಡಕ್ಕೆ ನ. 18ರಂದು ಆಗಮಿಸಲಿದ್ದು, ಎರಡು ದಿನ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿ, ಲಿಂಗಾಯತ ಮತಗಳ ಭದ್ರತೆಗಾಗಿ ಬಿಜೆಪಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ಮಾಡಲಿದ್ದಾರೆ.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಶ್ರಮಿಸಿದ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನೀಡಲೇ ಇಲ್ಲ. ಇದಕ್ಕಾಗಿ ಬೇಸರಗೊಂಡ ಶೆಟ್ಟರ್ ಸೋಮವಾರ ಕಾಂಗ್ರೆಸ್ ಸೇರಿದರು. ಇದು ಲಿಂಗಾಯತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾದಂತಾಗಿದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಲಿಂಗಾಯತ ಸಮುದಾಯದ ಮತಗಳು ತಪ್ಪುವ ಆತಂಕದಲ್ಲಿ ಬಿಜೆಪಿ ಇದೆ. ಅತ್ತ, ಕಾಂಗ್ರೆಸ್ ನಾಯಕರು ಕೂಡ, ಈ ಸಂದರ್ಭವನ್ನು ಬಿಜೆಪಿಯು ಲಿಂಗಾಯತ ವಿರೋಧಿ ಎಂಬಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಜೆಪಿಯು ಎಚ್ಚೆತ್ತುಕೊಂಡಿದೆ.
10 ಸೀಟು ಹೆಚ್ಚು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ
ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಇನ್ನೂ 10 ಸೀಟು ಹೆಚ್ಚು ಗೆಲ್ಲಲಿದ್ದು, ನಾವು ಒಟ್ಟು 150 ಸೀಟು ಗೆಲ್ಲಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 40 ವರ್ಷಗಳಿಂದ ಜನಸಂಘದ ಸಂದರ್ಭದಿಂದಲೂ ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮತ್ತು ಪುಟ್ಟಣ ಸೇರಿದಂತೆ ಹಲವರು ಬಿಜೆಪಿ ಮತ್ತು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಸೇರುವುದಕ್ಕೆ ಅವರೇನು ದಡ್ಡರೇ ಎಂದು ಪ್ರಶ್ನಿಸಿದ್ದಾರೆ.
ಅವರೆಲ್ಲರಿಗೂ ಬಿಜೆಪಿಯಿಂದ ಭವಿಷ್ಯವಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಅವರು ಬಿಜೆಪಿ ಮತ್ತು ಜೆಡಿಎಸ್ ಅನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದುವರೆಗೆ ನಾವು ನಡೆಸಿದ ಇಂಟ್ರನಲ್ ಅಸೆಸ್ಮೆಂಟ್ ವರದಿಯಲ್ಲಿ 135 ರಿಂದ 140 ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಆದರೆ ಈಗ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಅವರಿಂದ ಇನ್ನೂ ಹತ್ತು ಸೀಟು ಹೆಚ್ಚು ಗೆಲ್ಲುವ ಖಚಿತವಿದೆ ಎಂದರು. ಅಲ್ಲದೆ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗುವಾಗ ಯಾವುದಾದರೂ ಬೇಡಿಕೆಗಳನ್ನು ಇಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಯಾವುದೇ ಷರತ್ತುಗಳಿಲ್ಲದೆ ಅವರು ಪಕ್ಷಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬೀಳುತ್ತಾ ಹೊಡೆತ?
ಉತ್ತರ ಕರ್ನಾಟಕ ಭಾಗದ ಮತ್ತೋರ್ವ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕೂಡ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದಾರೆ. ಹೀಗೆ ಸವದಿ ಹಾಗೂ ಶೆಟ್ಟರ್ ಇಬ್ಬರು ಕೂಡಾ ಕಾಂಗ್ರೆಸ್ ಸೇರಿರೋದು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಮುಳುವಾಗಲಿದೆ ಎಂದೇ ವಿಶ್ಲೇಶಿಸಲಾಗುತ್ತಿದೆ. ಶೆಟ್ಟರ್ ಅವರೇ ಹೇಳಿರುವಂತೆ ಉತ್ತರ ಕರ್ನಾಟಕದ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಾಲಿಗೆ ಭದ್ರ ಮತಬುಟ್ಟಿ ಲಿಂಗಾಯತ ಸಮುದಾಯ. ಈಗ ಸವದಿ ಹಾಗೂ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಲಿಂಗಾಯತ ಸಮುುದಾಯದ ಮತಗಳು ಹಂಚಿಹೋಗುವ ಸಾಧ್ಯತೆ ಇದೆ. ಲಿಂಗಾಯತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾದಂತಾಗಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ. ಹೀಗಾಗಿ ಇಂತೆಲ್ಲಾ ವಿಚಾರಗಳನ್ನು ಪರಿಶೀಲನೆ ಮಾಡಿ ಲಿಂಗಾಯತ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ನಡ್ಡಾ ಇಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications