ಹುಬ್ಬಳ್ಳಿಗೆ ಆಗಮಿಸಿದ ಜೆ.ಪಿ.ನಡ್ಡಾ: ರಾಜ್ಯ ಬಿಜೆಪಿಯಲ್ಲಿನ ಡ್ಯಾಮೇಜ್ ಕಂಟ್ರೋಲ್‌ಗೆ ಪ್ಲಾನ್
ಹುಬ್ಬಳ್ಳಿ, ಏಪ್ರಿಲ್, 18: ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದ್ದು, ಬಿಜೆಪಿ ಯಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ವಾಗತಿಸಿದರು. ಇದನ್ನೆಲ್ಲ ಗಮನಿಸಿದರೆ ಜೆ.ಪಿ.ನಡ್ಡಾ ಅವರು ರಾಜ್ಯ ಬಿಜೆಪಿಯಲ್ಲಿನ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜೆ.ಪಿ.ನಡ್ಡಾ ಅವರನ್ನು ಸ್ವಾಗತಿಸಿ ಕರೆದುಕೊಂಡು ಹೋಗಲು ನಳೀನ ಕುಮಾರ್ ಕಟೀಲ್, ಮಹೇಶ್ ತೆಂಗಿನಕಾಯಿ, ಎಮ್.ಆರ್.ಪಾಟೀಲ್, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್ ಆಗಮಿಸಿದ್ದಾರೆ. ಇಂದಿನಿಂದ ಎರಡೂ ಕಾಲ ಧಾರವಾಡ, ಹಾವೇರಿ ಜಿಲ್ಲೆಯ ಪ್ರವಾಸದಲ್ಲಿರುವ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಬಿ.ವಿ.ಬಿ.ಕಾಲೇಜಿನಲ್ಲಿ ಸಂವಾದ ನಡೆಸಲಿದ್ದಾರೆ.

ಪ್ರಬುದ್ಧರ ಜೊತೆಗೆ ಸಂವಾದ ನಡೆಸಿದ ಬಳಿಕ ಸಂಜೆ ಖಾಸಗಿ ಹೋಟೆಲ್‌ನಲ್ಲಿ ಸರಣಿ ಸಭೆ ಮಾಡಲಿದ್ದಾರೆ. ಇನ್ನೂ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಜಿಲ್ಲಾ ಮಂಡಲ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲಿರುವ ಜೆ.ಪಿ.ನಡ್ಡಾ, ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಅಲ್ಲದೇ ಬಿಜೆಪಿಯ ಪದಾಧಿಕಾರಿಗಳಿಗೆ ಬೂಸ್ಟರ್ ಡೋಸ್ ಕೊಡಲು ಜೆ.ಪಿ.ನಡ್ಡಾ ಮುಂದಾಗಿದ್ದಾರೆ.
ಬೇಸರ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್
ಇನ್ನು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡರು. ಶೆಟ್ಟರ್ ಅವರು ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಗುರುತರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ನನಗೆ ಹಾಗೂ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪುವಂತೆ ಮಾಡಿದ್ದೇ ಬಿಎಲ್ ಸಂತೋಷ್' ಎಂದು ಹೇಳಿದ್ದಾರೆ. ನಾನು ಹಲವಾರು ದಿನಗಳಿಂದ ವೇದನೆ ಪಡುತ್ತಿದ್ದೇನೆ. ಹಲವು ನಾಯಕರ ಬಗ್ಗೆ ನಾನು ಮಾತನಾಡಬೇಕಿದೆ. ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ಮಾತನಾಡದೇ ಇದ್ದರೆ ಮುಂದೆ ಸಮಸ್ಯೆ ಎದುರಾಗಲಿದೆ ಎಂದರು.
ಅಲ್ಪ ಅವಧಿಯಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಬಹಳ ದೊಡ್ಡ ಶಕ್ತಿ ಹೊಂದಿದ್ದೇನೆ. ನನಗೆ ಟಿಕೆಟ್ ತಪ್ಪಲು ಕೆಲವರು ಕಾರಣರಾಗಿದ್ದಾರೆ. ಇದಕ್ಕೆಲ್ಲ ಬಿಎಲ್ ಸಂತೋಷ್ ಪ್ರಮುಖ ಕಾರಣ. ಯಾವುದೇ ಕಪ್ಪು ಚುಕ್ಕೆ ಆಪಾದನೆ ನನ್ನ ಮೇಲೆ ಇಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ನಾನು ಮಂತ್ರಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲು ನಾನು ಶ್ರಮಿಸಿದ್ದೇನೆ. ನನಗೆ ಕಲ್ಯಾಣ ಕರ್ನಾಟಕ ಸೇರಿ ಹಲವಾರು ಜವಬ್ದಾರಿ ಕೊಟ್ಟಿದ್ದಾರೆ. ನಾನು ಅದನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ಪಕ್ಷದ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿ ಬಿಜೆಪಿ ಇತ್ತು. ಎಲ್ಲಾ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಆದರೂ ಪಕ್ಷ ನನ್ನನ್ನು ಕಡೆಗಣಿಸಿದ ರೀತಿ ನನಗೆ ಬೇಸರ ತಂದಿದೆ ಎಂದರು.
'ನನ್ನನ್ನು ಕರೆದು ಸೌಜನ್ಯದಿಂದ ಮಾತನಾಡಲಿಲ್ಲ. ಚಿಕ್ಕ ಹುಡುಗನಿಗೆ ಹೇಳಿದಂತೆ ಟಿಕೆಟ್ ಇಲ್ಲ ಎಂದು ನನಗೆ ಹೇಳಿದರು. ಶೆಟ್ಟರ್ ಲಿಂಗಾಯತ ಅಲ್ಲ ಅಂತ ಕೆಲವರು ಮಾತನಾಡುತ್ತಾರೆ. ಟಿಕೆಟ್ ತೆಗೆದುಕೊಳ್ಳುವುದು ಮುಖ್ಯ ಅಲ್ಲ. ನನ್ನನ್ನು ಕಡೆಗಣಿಸಿದ ರೀತಿ ನನಗೆ ಸರಿ ಎನಿಸಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಕೆಲ ನಾಯಕರಿಂದ ಷಡ್ಯಂತ್ರ ನಡೆದಿದೆ' ಎಂದು ಶೆಟ್ಟರ್ ಕಿಡಿ ಕಾರಿದರು.
'ನಾನು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಮೇಲೆ ಪಕ್ಷಕ್ಕೆ ಅಷ್ಟು ಗೌರವವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬಹುದಿತ್ತು ಅಥವಾ ಕೇಂದ್ರಕ್ಕೆ ತೆಗೆದುಕೊಳ್ಳಬಹುದಾಗಿತ್ತು.ನನ್ನನ್ನು ಪದೇ ಪದೇ ಅವಮಾನಿಸಿದರು. ಅಪಪ್ರಚಾರ ನಡೆಸಿದರು. ಕಡೆಗೆ ಟಿಕೆಟ್ ಕೊಡದೇ ಸತಾಯಿಸಿದರು' ಎಂದು ಆರೋಪಿಸಿದ್ದಾರೆ.












Click it and Unblock the Notifications