ವಿಧಾನಸೌಧದ ಮುಂದೆ ಸಲ್ಲೇಖನ ವ್ರತ: ಸರ್ಕಾರಕ್ಕೆ ಜೈನರ ಎಚ್ಚರಿಕೆ
ಹುಬ್ಬಳ್ಳಿ, ಮಾರ್ಚ್ 17: ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಜೈನ ಸಮಾಜದ ಬಾಂಧವರಿಗೆ ವರೂರು ನವ್ರಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಮಾರ್ಚ್ 19ರಂದು ಬೆಂಗಳೂರು ಚಲೋ ಕರೆ ನೀಡಿರುವ ಶ್ರೀ ಗುಣಧರನಂದಿ ಮಹಾರಾಜರು, ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಜೈನ ಸಮಾಜದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭರವಸೆ ನೀಡಿತ್ತು. ಆದರೆ, ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿದಂತೆ ಇನ್ನೂ ನಾಲ್ಕು ಬೇಡಿಕೆಗಳು ಬಾಕಿ ಉಳಿದಿವೆ.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಿಗಮ-ಮಂಡಳಿ ರಚನೆಯ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ, ಮಾರ್ಚ್ 18ರಂದು ಮಧ್ಯಾಹ್ನ ಪ್ರತಿ ಹಳ್ಳಿ, ನಗರ ಪ್ರದೇಶದಿಂದ ಜೈನ ಸಮಾಜ ಬಾಂಧವರು ಬೆಂಗಳೂರಿನತ್ತ ಪ್ರಯಾಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಾರ್ಚ್ 19ರಂದು ಬೆಳಗ್ಗೆ 9 ಗಂಟೆಗೆ ಸಚಿವ ಜಮೀರ ಅಹ್ಮದ್ ಅವರನ್ನು ಭೇಟಿಯಾಗಿ, ನಿಗಮ- ಮಂಡಳಿ ರಚನೆಗೆ ಮನವಿ ನೀಡಿ, ಅವರನ್ನು ಸತ್ಕರಿಸಲಾಗುವುದು. ಅಧಿವೇಶನದಲ್ಲಿ ಜೈನ ಸಮಾಜದ ಪರವಾಗಿ ಧ್ವನಿ ಎತ್ತಿದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಸಹ ಇದೇ ಸಂದರ್ಭದಲ್ಲಿ ಭೇಟಿಯಾಗಿ ಸತ್ಕರಿಸಲಾಗುವುದು. ನಂತರ ಎಲ್ಲಾ ಸಚಿವರನ್ನು ಭೇಟಿಯಾಗಿ, ಸಮಾಜದ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗುವುದು ಎಂದರು.

ಇಷ್ಟಾದರೂ ಸರ್ಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ, ಜೂನ್ 8ರಂದು ಅಥಣಿ ತಾಲೂಕಿನ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಮುಂದಿನ ಹೋರಾಟದ ಬಗ್ಗೆ ಸಮಾಜದಲ್ಲಿ ನಿರ್ಧರಿಸಲಾಗುವುದು. ಇದೇ ಸಂದರ್ಭದಲ್ಲಿ ಪ್ರತಿ ಹಳ್ಳಿಗೆ ಖುದ್ದಾಗಿ ಭೇಟಿ ನೀಡಿ, ನಿಗಮ-ಮಂಡಳಿ ರಚನೆ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟನೆ ಮಾಡಲಾಗುವುದು ಎಂದು ಆಚಾರ್ಯ ಶ್ರೀ ಗುಣಧರನಂದಿ ಮಹರಾಜರು ತಿಳಿಸಿದ್ದಾರೆ.
ಆಮರಣ ಉಪವಾಸ
ಜೈನ ಅಭಿವೃದ್ಧಿ ನಿಗಮ-ಮಂಡಳಿ ರಚನೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದರೆ ಬೆಂಗಳೂರಿನ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸುವ ಮೂಲಕ ಸಲ್ಲೇಖನ ವೃತ ಕೈಗೊಳ್ಳುವುದಾಗಿ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications