ಮೈತ್ರಿ ಸರ್ಕಾರದ ಜಗಳ ಬಿಜೆಪಿಗೆ ಬಂಡವಾಳವಾಗಬೇಕೆಂದ ಶೆಟ್ಟರ್
ಹುಬ್ಬಳ್ಳಿ, ಅಕ್ಟೋಬರ್ 8: "ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡ ಮೈತ್ರಿ ಸರ್ಕಾರ ಪಾಪದ ಕೊಡ ತುಂಬಿದ ನಂತರ ಬಿದ್ದು ಹೋಗಿದೆ. ಅಕ್ಕ-ಪಕ್ಕ ಕೂರುತಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ಕಿತ್ತಾಟ ನಡೆಸಿದ್ದಾರೆ" ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.
ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, "ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದ ನಂತರ ತಾವು ತಾವೇ ಜಗಳ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕರು ಜೆಡಿಎಸ್ ಪಕ್ಷ ಬಿಟ್ಟು ಹೊರಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ಲಾಭವನ್ನು ಬಿಜೆಪಿ ಪಡೆದು ಪದವೀಧರ ಚುನಾವಣೆಯನ್ನು ಗೆಲ್ಲಬೇಕು. ಈ ಹಿನ್ನೆಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ವಿಚಾರದಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಎಲ್ಲರ ಜೊತೆಗೆ ಸಮಾಲೋಚನೆ ನಡೆಸಲಾಗುವುದು" ಎಂದರು.
"ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಬಿಜೆಪಿ ಸರ್ಕಾರವಿದ್ದು, ಪ್ರತಿಪಕ್ಷಗಳ ಜಗಳದ ಲಾಭ ಪಡೆದು ಚುನಾವಣೆ ಗೆಲ್ಲುವ ರಣತಂತ್ರ ರೂಪಿಸಲಾಗುವುದು. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಕಾಂಗ್ರೆಸ್ ನಾಯಕರುಗಳೇ ಕಾಂಗ್ರೆಸ್ ಆಡಳಿತ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಒಗ್ಗಟ್ಟಿನಲ್ಲಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗೋದು ಗ್ಯಾರಂಟಿ" ಎಂದು ಭವಿಷ್ಯ ನುಡಿದರು.

ನೆರೆ ಪರಿಹಾರ ವಿಚಾರವಾಗಿ ವಿಪಕ್ಷಗಳ ಟೀಕೆ ಕುರಿತು ಮಾತನಾಡಿದ ಅವರು, "ನರೇಂದ್ರ ಮೋದಿ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಬಗ್ಗೆ ಗೊತ್ತಿಲ್ಲದೇ ಮನಸ್ಸೋ ಇಚ್ಛೆ ಟೀಕೆ ಮಾಡುತ್ತಿದ್ದಾರೆ. ಕೇಂದ್ರದಿಂದ ಮಧ್ಯಂತರ ನೆರೆ ಪರಿಹಾರ ಬಿಡುಗಡೆಯಾಗಿದೆ. ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗುವುದು. ವಿಪಕ್ಷಗಳು ರಾಜಕಾರಣ ಮಾಡುವ ಹಿನ್ನೆಲೆಯಲ್ಲಿ ಸುಮ್ಮನೆ ಟೀಕೆ ಮಾಡುತ್ತಿದ್ದಾರೆ" ಎಂದು ಹರಿಹಾಯ್ದರು.












Click it and Unblock the Notifications