ಸವದಿ, ಸಂತೋಷ್ ಪಕ್ಷ ತೊರೆದಿದ್ದರೂ, ಅಪರಾಧ ಮಾಡಿದವನಂತೆ ಎಲ್ಲಾ ನನ್ನ ಮೇಲೆ ಮುಗಿಬಿದ್ದಿದ್ದಾರೆ-ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್ 25: ಕೇಂದ್ರ ಸಚಿವ ಅಮಿತ್ ಶಾ, ಬಿ.ಎಸ್ ಯಡಿಯೂರಪ್ಪ, ಜೆ.ಪಿ ನಡ್ಡಾ, ಸ್ಮೃತಿ ಇರಾನಿ ಹೀಗೆ ಬಿಜೆಪಿ ನಾಯಕರು ಎಲ್ಲರೂ ಸೇರಿ ನನ್ನ ಸೋಲಿಸಲು ಪಣ ತೊಟ್ಟಿದ್ದಾರೆ. ಬಿಜೆಪಿ ನನ್ನನ್ನು ಸೋಲಿಸುವ ಅಭಿಯಾನ ನಡೆಸುತ್ತಿದೆ. ಈ ಬಡಪಾಯಿ ಮೇಲೆ ಯಾಕೆ ಮುಗಿ ಬೀಳುತ್ತಿದ್ದಾರೆ ಗೊತ್ತಿಲ್ಲ..? ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಯನೂರ ಮಂಜುನಾಥ್, ಲಕ್ಷ್ಮಣ ಸವದಿ, ಎನ್.ಆರ್ ಸಂತೋಷ್ ಎಲ್ಲರೂ ಪಕ್ಷ ತೊರೆದಿದ್ದಾರೆ. ಆದರೆ ನಾನು ಪಕ್ಷ ತೊರೆದಿದ್ದನ್ನು ದೊಡ್ಡ ಅಪರಾಧ ಮಾಡಿದವನಂತೆ ನನ್ನ ವಿರುದ್ಧ ಮುಗಿಬಿದ್ದಿದ್ದಾರೆ ಎಂದರು.

ಬಿ.ಎಸ್ ಯಡಿಯೂರಪ್ಪ ಕೆಜೆಪಿ ಕಟ್ಟುವಾಗ ಐಡಿಯಲಾಜಿ ಎಲ್ಲಿ ಹೋಗಿತ್ತು.? ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಯಡಿಯೂರಪ್ಪ ಅವರ ಬೈಗುಳ, ಟೀಕೆಯನ್ನು ಆಶೀರ್ವಾದ ಎಂದು ತೆಗೆದುಕೊಂಡಿದ್ದೇನೆ. ಟಿಕೆಟ್ ಕೊಡಿಸುವುದಾಗಿ ಹೇಳಿ ಯಡಿಯೂರಪ್ಪ ಈಗ ಅಸಹಾಯಕರಾಗಿದ್ದಾರೆ. ಯಡಿಯೂರಪ್ಪ ಅವರ ಬೈಗುಳ ನನ್ನ ಗೆಲುವಿಗೆ ಅನುಕೂಲವಾಗಲಿದೆ. ನನಗೆ ಬೈದಷ್ಟು ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು.
ನಾನು ಪಕ್ಷ ದ್ರೋಹದ ಕೆಲಸ ಮಾಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪಕ್ಷದಲ್ಲಿ ನನ್ನ ವಿರುದ್ಧ ಕುತಂತ್ರ ನಡೆದಿದೆ. ನೇರವಾಗಿ ನಾನು ಬಿ.ಎಲ್ ಸಂತೋಷ್ ಬಗ್ಗೆ ಟೀಕಿಸಿದ್ದು. ಆದರೆ ಸಂತೋಷ್ ಈ ಬಗ್ಗೆ ಉತ್ತರಿಸಿಲ್ಲ. ಯಡಿಯೂರಪ್ಪ ಅವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸ ನಡೆದಿದೆ ಎಂದರು.

ಕೆಜೆಪಿ ಕಟ್ಟಿ ಶಿಗ್ಗಾಂವಿಗೆ ಪ್ರಚಾರಕ್ಕೆ ಹೋದಾದ ಇದೇ ಯಡಿಯೂರಪ್ಪ ಬೊಮ್ಮಾಯಿ ಅವರನ್ನು ಬೈಯ್ದಿದ್ದರು. ಆದರೆ ಬೊಮ್ಮಾಯಿ ಗೆದ್ದು ಬಂದಿದ್ದರು. ಸೆಂಟ್ರಲ್ ಕ್ಷೇತ್ರದಲ್ಲಿ ನನ್ನ ಗೆಲ್ಲುವುದು ನಿಶ್ಚಿತ ಎಷ್ಟು ಜನ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ಟೀಕೆ ಮಾಡುತ್ತಾರಾ ಮಾಡಲಿ ಅದು ನನಗೆ ಲಾಭವಾಗಲಿದೆ. ಐಡಿಯಾಲಜಿ ಬಗ್ಗೆ ಮಾತನಾಡುವವರು ಈ ಹಿಂದೆ ಆಪರೇಶನ್ ಮೂಲಕ ಕಾಂಗ್ರೆಸ್‌ನವರನ್ನ ಪಕ್ಷಕ್ಕೆ ಕರೆತಂದರು ನಾನು ಯಾವತ್ತೂ ಬಿಜೆಪಿಗೆ ಅನ್ಯಾಯ, ದ್ರೋಹ ಮಾಡಿಲ್ಲ ಕೇವಲ ಹುದ್ದೆಗಾಗಿ ನಾನು ಪಕ್ಷ ತೊರೆದಿಲ್ಲ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಪಕ್ಷ ತೊರೆದಿದ್ದೇನೆ ಎಂದು ತಮ್ಮ ನಿಲುವುವನ್ನು ಸಮರ್ಥಿಸಿಕೊಂಡರು.












Click it and Unblock the Notifications