ಲೋಕಸಭಾ ಟಿಕೆಟ್ ಬಗ್ಗೆ ಮೌನ ಮುರಿದ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಹುಬ್ಬಳ್ಳಿ, ಮಾರ್ಚ್ 11: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಹೋದಾಗಲು ಮತ್ತೆ ಮರಳಿ ಬಿಜೆಪಿ ಬಂದ ಬಳಿಕವು ಧಾರವಾಡ ಟಿಕೆಟ್ ಹಂಚಿಕೆ ಕುರಿತು ಚರ್ಚೆಯಾಗುತ್ತಲೇ ಇದೆ. ಸದ್ಯ ಬಿಜೆಪಿಯಲ್ಲಿರುವ ಅವರಿಗೆ ಟಿಕೆಟ್ ಸಿಗುತ್ತದೆಯೋ ಇಲ್ಲವೋ? ಎಂಬುದರ ಬಗ್ಗೆ ಸ್ವತಃ ಅವರೇ ಮೌನ ಮುರಿದು ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಧಾರವಾಡ, ಬೆಳಗಾವಿ ಕ್ಷೇತ್ರಗಳ ಲೋಕಸಭಾ ಟಿಕೆಟ್ ಹಂಚಿಕೆ ಕುರಿತು ಇದುವರೆಗೆ ನನ್ನೊಂದಿಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಪಕ್ಷದ ವರಿಷ್ಠರು ಯಾವ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ತಿಳಿಸುತ್ತಾರೆ ಅಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಯಾವುದೇ ಕ್ಷೇತ್ರದಲ್ಲಿ ತಾವು ಸ್ಪರ್ಧೆಗೆ ಸಿದ್ಧ ಎನ್ನುವ ಮೂಲಕ ತಾವು ಧಾರವಾಡ ಇಲ್ಲವೇ ಬೆಳಗಾವಿ ಟಿಕೆಟ್ ಆಕಾಂಕ್ಷಿ ಎಂಬುದನ್ನು ಪುನರುಚ್ಚರಿಸಿದ್ದಾರೆ.
ಸೂಚಿಸದರೆ ಪಕ್ಷ ಸಂಘಟನೆಗೂ ಸಿದ್ಧ
ಎರಡು ಕ್ಷೇತ್ರಗಳ ಬಗ್ಗೆ ಪಕ್ಷದ ನಾಯಕರು, ವರಿಷ್ಠ ಜೊತೆಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಕೇಂದ್ರ ವರಿಷ್ಠರಿಂದ ಸೂಚನೆ ಬಂದರೂ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ಒಂದು ವೇಳೆ ಪಕ್ಷದ ಸಂಘಟಿಸುವಂತೆ ಸೂಚನೆ ನೀಡಿದರೂ ಅದಕ್ಕೂ ತಯಾರಾಗಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರೇ ತೀರ್ಮಾನ ಕೈಗೊಳ್ಳತ್ತಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಈ ಬಾರಿ ಹಿರಿಯ/ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತಿವೆ. ಆದರೆ ದೆಹಲಿ ವರಿಷ್ಠ ಮಟ್ಟದಲ್ಲಿ ಯಾವ ನಿರ್ಣಯಗಳಾಗುತ್ತಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂದರು.

ನನ್ನ ಮೌನವೇ ಉತ್ತರ
ಇತ್ತೀಚಿನ ಬಿಜೆಪಿ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನ ನೀಡದ ವಿಚಾರಕ್ಕೆ ಮೌನದಿಂದಲೇ ಉತ್ತರಿಸಿದ ಜಗದೀಶ್ ಶೆಟ್ಟರ್, ಆಹ್ವಾನದ ವಿಚಾರವಾಗಿ ನಾನು ಏನನ್ನು ಪ್ರತಿಕ್ರಿಯಿಸುವುದಿಲ್ಲ. ಮೌನವೇ ಅದಕ್ಕೆ ಉತ್ತರ ಎಂದಷ್ಟೆ ಹೇಳಿದರು.
ಈ ಹಿಂದೆ ವಿಧಾನಸಭಾ ಚುನಾವಣೆ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಜಗದೀಶ್ ಶೆಟ್ಟರ್ ಅವರು ಪಕ್ಷ ತ್ಯೆಜಿಸಿ ಕಾಂಗ್ರೆಸ್ ಸೇರಿದ್ದರು. ಬಳಿಕ ಅಲ್ಲಿ ಸ್ಪರ್ಧಿಸು ಸೋತರು. ಬಳಿಕ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಚೆ ಇಲ್ಲ ಎಂದಿದ್ದರು.
ಪಟ್ಟಿ ಬಿಡುಗಡೆ ಬಳಿಕ ಪ್ರಶ್ನೆಗಳಿಗೆ ಉತ್ತರ
ಬಿಜೆಪಿ ಸೇರ್ಪಡೆ ಬಳಿಕ ತಾವು ಬೆಳಗಾವಿ ಇಲ್ಲವೇ ಧಾರವಾಡ ಆಕಾಂಕ್ಷಿ ಎಂದು ಹೇಳಿದ್ದರು. ಇದೀಗ ವರಿಷ್ಠರು ಪಕ್ಷ ಸಂಘಟನೆಗೆ ಸೂಚಿಸದರೆ ಅದಕ್ಕೂ ಬದ್ಧ ಎಂದು ಹೇಳುತ್ತಿದ್ದಾರೆ. ಸದ್ಯ ಅವರಿಗೆ ಟಿಕೆಟ್ ನೀಡುವುದು ಡೋಲಾಮಾನವಾಗಿದೆ. ಮೊದಲ ಪಟ್ಟಿಯಲ್ಲಿಯೇ ಶೆಟ್ಟರ್ ಅವರಿಗೆ ಟಿಕೆಟ್ ಸಿಗುತ್ತಲೆಯೋ ಇಲ್ಲವೇ, ಹಾಲಿ ಸಂಸದರಿಗೆ ಯಾರಿಗೆಲ್ಲ ಟಿಕೆಟ್ ಕೈತಪ್ಪಲಿದೆ ಎಂಬುದಕ್ಕೆ ಉತ್ತರ ಸಿಗುತ್ತದೆ.












Click it and Unblock the Notifications