Infosys: 2ನೇ ಶ್ರೇಣಿ ನಗರಗಳ ಅಭಿವೃದ್ಧಿಗೆ ಇನ್ಫೋಸಿಸ್ ಕೊಡುಗೆ: ಕೇಂದ್ರ ಸಚಿವ
ಹುಬ್ಬಳ್ಳಿ, ಜೂನ್ 18: ಉತ್ತರ ಕರ್ನಾಟಕ ಭಾಗದಲ್ಲಿ ಐಟಿ ಉದ್ಯೋಗ ನೆಲೆ ಕಂಡು ಕೊಳ್ಳಲು ಇನ್ಫೋಸಿಸ್ ಒಂದೊಳ್ಳೆ ಅವಕಾಶ ಕಲ್ಪಿಸಿದೆ. ತನ್ನ ಉದ್ಯೋಗಿಗಳಿಗೆ ಆಕರ್ಷಕ ವೇತನ ಸಹಿತ ಹುಬ್ಬಳ್ಳಿಗೆ ವರ್ಗಾವಣೆ ಪಡೆದುಕೊಳ್ಳಬಹುದೆಂದು ಘೋಷಿಸಿದೆ. ಈ ಮೂಲಕ ಇದಕ್ಕೆ 2ನೇ ಶ್ರೇಣಿ ನಗರಗಳ ಅಭಿವೃದ್ಧಿಗೆ ಇನ್ಫೋಸಿಸ್ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವರು ಐಟಿ ಕಂಪನಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಬೆಂಗಳೂರು, ಪುಣೆಯಂತಹ ಸ್ಥಳಗಳಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿಯ ಇನ್ಫೋಸಿಸ್ ಕಂಪನಿಗೆ ವರ್ಗಾವಣೆ ಬಯಸುವ ನೌಕರರಿಗೆ ಉತ್ತಮ ಪ್ಯಾಕೇಜ್ ಸಹಿತ ವರ್ಗಾವಣೆ ನೀತಿ ಜಾರಿಗೊಳಿಸಿದೆ. ಈ ನಿರ್ಧಾರ ಮೆಚ್ಚಿ ಪ್ರಹ್ಲಾದ್ ಜೋಶಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಗಳಿಂದ ಈ ಹಿಂದೆ ಬೇಡಿಕೆ ಸಲ್ಲಿಕೆ
ಇನ್ಫೋಸಿಸ್ ತನ್ನ ಹುಬ್ಬಳ್ಳಿ ಶಾಖೆ ತನ್ನ ನಿರ್ಧಾರಗಳ ಮೂಲಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದೆ. ಈ ಭಾರತದ ಉದ್ಯೋಗಿಗಳಿಗೆ ಇನ್ಫೋಸಿಸ್ ಸದಾ ಉತ್ತೇಜನ, ಪ್ರೋತ್ಸಾಹ ನೀಡುತ್ತಿದೆ. ಈ ನೆಲದಲ್ಲಿ ಕಂಪನಿಯ ಕಾರ್ಯ ಚಟುವಟಿಕೆಗಳು ಹೆಚ್ಚಾಗಲಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಜನಪ್ರತಿನಿಧಿಗಳಿಂದ ಬೇಡಿಕೆ ಸಲ್ಲಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಇನ್ಫೋಸಿಸ್ ಈ ಕ್ರಮದಿಂದ ಎರಡನೇ ಶ್ರೇಣಿಯ ನಗರಗಳ ಪ್ರತಿಭಾವಂತ ಯುವಕರಿಗೆ ಹೆಚ್ಚು ಹೆಚ್ಚು ಉದ್ಯೋಗ ಲಭ್ಯವಾಗುತ್ತದೆ. ಅಭಿವೃದ್ಧಿಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದೇನು?
ಇದೇ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಪ್ರತಿಕ್ರಿಯಿಸಿದ್ದಾರೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಜನರ ಹಿತ ಕಾಪಾಡುವುದು ನನ್ನ ಕರ್ತವ್ಯ. 4 ತಿಂಗಳ ಹಿಂದೆ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದೆ. ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಈಡೇರಿಸುತ್ತಿಲ್ಲ ಎಂದು ಕೇಳಿದ್ದೆ.

ಕ್ಷೇತ್ರದ ಜನರಿಗೆ ಇಲ್ಲಿನ ಭೂಮಿಯನ್ನು ಬಿಟ್ಟುಕೊಟ್ಟ ರೈತರ ಮೇಲಿನ ಆಳವಾದ ಕರ್ತವ್ಯ ಪ್ರಜ್ಞೆಯಿಂದ ನಾನು ಈ ನಿಲುವು ತೆಗೆದುಕೊಂಡಿದ್ದೆ. ಅದರಂತೆ ಇಂದು Infosys ವರ್ಗಾವಣೆ ನೀತಿ ಘೋಷಿಸಿದೆ.
ಉತ್ತರ ಕರ್ನಾಟಕದ ಗೆಲುವು: ಶಾಸಕ
ವರ್ಗಾವಣೆಗೊಳ್ಳುವ ನೌಕರರಿಗೆ ಹುಬ್ಬಳ್ಳಿ ಅಭಿವೃದ್ಧಿ ಕೇಂದ್ರಕ್ಕೆ ತೆರಳಲು ಆಕರ್ಷಕ ಪ್ಯಾಕೇಜ್ ಘೋಷಿಸಿದೆ. ಕಂಪನಿಯ ಈ ನಿರ್ಧಾರವು ಇಲ್ಲಿನ ಅಭಿವೃದ್ಧಿ, ಕಾರ್ಯಾಚರಣೆಗಳನ್ನು ಬಲಪಡಿಸುವುದು ಮಾತ್ರವಲ್ಲದೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗುತ್ತದೆ.
ದೂರದ ಊರುಗಳಿಲ್ಲಿದ್ದ ಕೆಲಸಗಾರರು ಮತ್ತವರ ಕುಟುಂಬಗಳನ್ನು ಮತ್ತೆ ಒಂದುಗೂಡಿಸಲು ಈ ನಿರ್ಧಾರ ಪೂರಕವಾಗಿದೆ. ಇನ್ಫೋಸಿಸ್ ನಿರ್ಧಾರ ಉತ್ತರ ಕರ್ನಾಟಕದ ಗೆಲುವು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications