Election Special Train: ಮತದಾರರಿಗಾಗಿ ಬೆಂಗಳೂರು-ಧಾರವಾಡ-ಬೆಳಗಾವಿ ವಿಶೇಷ ರೈಲು: ವೇಳಾಪಟ್ಟಿ
ಹುಬ್ಬಳ್ಳಿ, ಮೇ 04: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಬಳಿಕ ಇದೇ ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಈ ಸಂಬಂಧ ಪ್ರಯಾಣಿಕರ/ಮತದಾರರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಹಾಗಾದರೆ ಎಲ್ಲಿಂದ ಎಲ್ಲಿಗೆ ಈ ರೈಲು ಪ್ರಯಾಣಿಸಲಿದೆ? ನಿಲ್ದಾಣ, ಸಮಯದ ಮಾಹಿತಿಗೆ ಮುಂದೆ ಓದಿ.
ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ಸಂಬಂಧ ನೈಋತ್ಯ ರೈಲ್ವೆಯು (SWR) ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೇವೆ ಒದಗಿಸಿದೆ. ಈ ರೈಲು ದಕ್ಷಿಣ ಕರ್ನಾಟಕದಿಂದ ಉತ್ತರ ಕರ್ನಾಟಕದ ಗಡಿ ಜಿಲ್ಲೆವರೆಗೆ ಸಂಪರ್ಕ ಸಾಧಿಸಲಿದೆ.

ಚುನಾವಣಾ ವಿಶೇಷ ರೈಲು ಮತದಾನ ಒಂದು ದಿನ (ಮೇ 7) ಮುಂಚಿತವಾಗಿ ರಾತ್ರಿ ಅಂದರೆ ಮೇ 6ರಂದು ಸೋಮವಾರ ರಾತ್ರಿ 9.55ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದೆ. ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ.
ಬೆಳಗಾವಿವರೆಗೂ ರೈಲು ಸೇವೆ
ಇದೇ ರೈಲು ಧಾರವಾಡದಿಂದ ಮುಂದೆ ಸಾಗಿ ಗೋಕಾಕ್- ಘಟಪ್ರಭಾ-ರಾಯಭಾಗ- ಕುಡಚಿ ಮಾರ್ಗವಾಗಿ ಬೆಳಗ್ಗೆ 10:30 ಗಂಟೆಗೆ ಬೆಳಗಾವಿ ತಲುಪಲಿದೆ. ಈ ಮೂಲಕ ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗ ಮಾಡುವ ನೌಕರರಿಗೆ ಮತದಾನ ದಿನ ಅವರವರ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಈ ರೈಲ್ವೆ ಸೌಲಭ್ಯ ಕಲ್ಪಿಸಲಾಗಿದೆ.
ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ವೇಳೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯದ ಗಡಿ ಜಿಲ್ಲೆ ಬೆಳಗಾವಿ ಭಾಗದಲ್ಲಿ ಮತದಾನದ ಹಕ್ಕಿರುವವರು, ಕೆಲಸದ ನಿಮಿತ್ತ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹವರಿಗೆ ಸೂಕ್ತ ದಿನದಂದು ತಮ್ಮೂರುಗಳಿಗೆ ಪ್ರಯಾಣಿಸಲು ಈ ವಿಶೇಷ ರೈಲು ಸಂಚಾರದಿಂದ ಅನುಕೂಲವಾಗಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಾಗೂ ಹೆಚ್ಚಿನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಈ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮತದಾರರು ಸೇರಿದಂತೆ ಸಾರ್ವಜನಿಕರು ಈ ರೈಲ್ವೆಯ ಸದುಪಯೋಗ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಚುನಾವಣೆಗಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ರೈಲು ಮಾತ್ರವಲ್ಲದೇ ಬೆಂಗಳೂರಿನಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು, ಗ್ರಾಮಗಳಿಗೆ ಮತದಾನ ದಿನ ತೆರಳಲು ಅನುಕೂಲವಾಗುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಿಂದ (NWKRTC) ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ಮಾತ್ರವಲ್ಲದೇ, ಪುಣೆ, ಗೋವಾರ ಸೇರಿದಂತೆ ಇನ್ನಿತರ ಭಾಗಗಳಿಂದಲೂ ನೀವು ಎರಡನೇ ಹಂತದ ಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ನಿಮ್ಮ ಜಿಲ್ಲೆಗಳು ಮತ್ತು ಊರುಗಳಿಗೆ ಬರಲು ಅನುಕೂಲವಾಗುವಂತೆ NWKRTC ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಘಟಕ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications