Independence Day: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ 'ಬೃಹತ್ ಪಾರಂಪರಿಕ ನಡಿಗೆ' ಯಶಸ್ವಿ
ಹುಬ್ಬಳ್ಳಿ, ಆಗಸ್ಟ್ 13: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಸ್ಮರಣಾರ್ಥ ನಿಟ್ಟಿನಲ್ಲಿ ನಗರದಲ್ಲಿ ನಡೆದ ಬೃಹತ್ ಪಾರಂಪರಿಕ ನಡಿಗೆಯೂ ಯಶಸ್ವಿಯಾಗಿದೆ. ಆ ಮೂಲಕ ಹೊಸ ಪರಂಪರೆ ಪ್ರಾರಂಭವಾಗಿದೆ. ಪ್ರತಿಯೊಬ್ಬರೂ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿ, ಗೌರವಿಸಬೇಕು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು.
ಇಂದು ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿ ಜಿಲ್ಲಾಡಳಿತ, ಹುಬ್ಬಳ್ಳಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

13 ವರ್ಷದ ಬಾಲಕ ಸ್ವಾತಂತ್ರ್ಯ ಹೋರಾಟಗಾರ
ನಾವು ಶಾಲಾ ದಿನಗಳಲ್ಲಿ ಪಠ್ಯ ಚಟುವಟಿಕೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಓದಿ ತಿಳಿದುಕೊಂಡಿದ್ದೇವೆ. 1942 ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಹುಬ್ಬಳ್ಳಿಯ 13 ವರ್ಷದ ಬಾಲಕ ನಾರಾಯಣ ಡೋಣಿ ಅವರು ಹೋರಾಟದಲ್ಲಿ ಭಾಗಿಯಾಗಿ, ಪ್ರಾಣ ತ್ಯಾಗ ಮಾಡಿದರು. ಅವರು ಸುಭಾಷಚಂದ್ರ ಬೋಸ್ ಅವರ ಪ್ರೇರಣೆಯಿಂದ ಹೋರಾಟದಲ್ಲಿ ಧುಮುಕಿದರು. ನಾರಾಯಣ ಡೋಣಿ ಅವರ ಕುರಿತು ಹೆಚ್ಚು ಪ್ರಚಾರ ಮಾಡಬೇಕಿದೆ ಎಂದು ಅವರು ಹೇಳಿದರು.
ಲ್ಯಾಮಿಂಗ್ಟನ್ ಶಾಲೆಯಲ್ಲಿ ಅವರ ಜೀವನ, ಹೋರಾಟದ ಕುರಿತು ಗ್ಯಾಲರಿ, ಚಿತ್ರಗಳನ್ನು ಅಳವಡಿಸಬೇಕು. ಭಾರತ ದೇಶ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ರಾಜ್ಯದ 2ನೇ ರಾಜಧಾನಿ ಹುಬ್ಬಳ್ಳಿಯಿಂದ ಹೋರಾಟಕ್ಕೆ ಕೊಡುಗೆ
ಇದೇ ವೇಳೆ ಶಾಸಕರಾದ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಹುಬ್ಬಳ್ಳಿಯೂ ಸಾಂಸ್ಕೃತಿಕ ನಗರಿ, 2ನೇ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಧಾರವಾಡ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಬೇಕು. ಆ ಮೂಲಕ ಎಲ್ಲರೂ ಸ್ವಾತಂತ್ರ್ಯದ ಹಿರಿಮೆ ಗರಿಮೆಗಳ ಬಗ್ಗೆ ತಿಳಿಯಬಹುದು.

ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
5000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಆಚರಣೆ ಮಾಡಲಾಗುತ್ತಿದೆ. ದೇಶದ ಹೆಮ್ಮೆ, ಪರಂಪರೆಯ ಬಗ್ಗೆ ಯುವಕರಿಗೆ ತಿಳಿಸುವ ನಿಟ್ಟಿನಲ್ಲಿ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಬೇಕಿದೆ. ನಮ್ಮ ಊರಿನ ಹೆಮ್ಮೆಯ ಬಗ್ಗೆ ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ.
ಇಂದು ನಡೆದ ಪಾರಂಪರಿಕ ನಡಿಗೆಯಲ್ಲಿ ವಿವಿಧ ಶಾಲೆಗಳ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿ ಯಶಸ್ವಿಗೊಳಿಸಿದರು. ಭಾರತ ದೇಶವು ಇಂದು ವಿವಿಧ ಕ್ಷೇತ್ರಗಳಲ್ಲಿ ಮುಂದಿದೆ. ದೇಶವು ವೈಜ್ಞಾನಿಕ, ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಮುನ್ನಡೆಯನ್ನು ಸಾಧಿಸಿದೆ ಎಂದು ಅವರು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಸ್ವಾತಂತ್ರ್ಯದ ಸ್ಪೂರ್ತಿ ಎಲ್ಲರಲ್ಲೂ ಮೂಡಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಮಾಡಬೇಕು. ಯುವ ಜನರು ದೇಶವನ್ನು ಮುನ್ನಡೆಸಬೇಕಿದೆ ಎಂದು ಅವರು ಹೇಳಿದರು.
ಪಾರಂಪರಿಕ ನಡಿಗೆ ಸಾಗಿದ ಮಾರ್ಗ
ಈ ಪಾರಂಪರಿಕ ನಡಿಗೆಯು ''ವಿದ್ಯಾನಗರದ ಮಹಿಳಾ ವಿದ್ಯಾಪೀಠದಿಂದ ಆರಂಭವಾಗಿ ಕಿತ್ತೂರು ಚೆನ್ನಮ್ಮ ವೃತ್ತ, ಮಹಾನಗರ ಪಾಲಿಕೆ, ಅಂಬೇಡ್ಕರ್ ವೃತ್ತ, ಕೊಪ್ಪಿಕರ ರಸ್ತೆ, ಬ್ರಾಡ್ವೆ ಮಾರ್ಗದ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಬಲಿದಾನವಾದ ಬಾಲಕ ನಾರಾಯಣ ದೋಣಿ ಅವರ ಸ್ಮಾರಕಕ್ಕೆ ಬಂದು ಗೌರವ ಸಲ್ಲಿಸುವ ಮೂಲಕ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ.ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ರಾಮಣ್ಣ ಬಡಿಗೇರ, ನಾರಾಯಣ ಡೋಣಿ ಅವರ ಮನೆತನದ ಕಂಡೋಬಾ ಡೋಣಿ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications