ಹುಬ್ಬಳ್ಳಿ: ಖಾದಿ ನೆಲದಲ್ಲಿಯೇ ಹೆಚ್ಚಿದ ಮಾರಕ ಪಾಲಿಸ್ಟರ್ ರಾಷ್ಟ್ರಧ್ವಜಗಳ ಮಾರಾಟ
ಹುಬ್ಬಳ್ಳಿ, ಆಗಸ್ಟ್ 14: ಹಳ್ಳಿಯ ಗ್ರಾಮ ಪಂಚಾಯತಿಯಿಂದ ಹಿಡಿದು ದೆಹಲಿ ಕೆಂಪು ಕೋಟೆಯವರಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಏಕೈಕ ರಾಷ್ಟ್ರಧ್ವಜ ತಯಾರಿಕಾ ಕೇಂದ್ರದ ಊರಿನಲ್ಲಿಯೇ ಪಾಲಿಸ್ಟರ್ ಧ್ವಜದ ಹಾವಳಿ ಹೆಚ್ಚಾಗಿದೆ.
ಖಾದಿ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಇತಿಹಾಸ, ಗೌರವ ಹಾಗೂ ಪರಂಪರೆ ಇದೆ. ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿ ಕೆಲವರಿಗೆ ಜೀವನದ ತ್ಯಾಗ ಮಾಡುವವರಿಗೂ ಹೋರಾಟಕ್ಕೆ ಅಣಿ ಮಾಡಿಕೊಟ್ಟಿದ್ದು, ಈ ಖಾದಿ ರಾಷ್ಟ್ರಧ್ವಜ. ಆದರೆ ಈಗ ಬೇಕಾಬಿಟ್ಟಿ ರಾಷ್ಟ್ರ ಧ್ವಜ ತಯಾರಿಕೆ ಮಾಡುತ್ತಿದ್ದು ಅದರಲ್ಲೂ ಪಾಲಿಸ್ಟರ್ ಬಟ್ಟೆಗಳ ಧ್ವಜದ್ದೇ ದರ್ಬಾರ್ ಆಗಿದೆ.

ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳಿಗೆ ಪಾಲಿಸ್ಟರ್ ಧ್ವಜ ಮಾರಾಟ ಮಾಡಲು ಬಂದಿಳಿದಿದ್ದಾರೆ. ದೇಶದ ಪ್ರತಿ ರಾಜ್ಯಗಳಿಗೂ ಕರ್ನಾಟಕದಿಂದ ಅದರಲ್ಲೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಲಾದ ತ್ರಿವರ್ಣ ಧ್ವಜ ಸರಬರಾಜು ಆಗುತ್ತದೆ.
ಗ್ರಾಮದಿಂದ ಹಿಡಿದು ದೆಹಲಿಯ ಕೆಂಪುಕೋಟೆ ವರೆಗೆ ಈ ಧ್ವಜ ಹಾರಾಡುತ್ತಿರುವುದು ರಾಜ್ಯದ ಮೆರಗು ಹೆಚ್ಚಿಸಿದೆ. ಆದರೆ, ಕಳೆದ 2-3 ವರ್ಷಗಳಿಂದ ರಾಜ್ಯಾದ್ಯಂತ ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದಾಗಿ ಖಾದಿ ಗ್ರಾಮೋದ್ಯೋಗದ ಮೇಲೆ ಇದು ದುಷ್ಪರಿಣಾಮ ಬೀರಿದೆ ಎಂದು ಸಾಮಾಜಿಕ ಕಾರ್ಯಕರ್ತ ಸದಾನಂದ ಆತಂಕ ವ್ಯಕ್ತಪಡಿಸಿದರು.
ಪಾಲಿಸ್ಟರ್ ಧ್ವಜ ಮಾರಾಟಕ್ಕಾಗಿಯೇ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಬಿಹಾರದಿಂದ ಸಾವಿರಾರು ಜನರು ರಾಜ್ಯದ ವಿವಿಧ ನಗರ ಪ್ರದೇಶಗಳಿಗೆ ಮಾರಾಟಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಅನ್ಯ ರಾಜ್ಯಗಳಿಂದ ಕಳೆದ 2 ದಿನಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ 300ಕ್ಕೂ ಅಧಿಕ ಮಾರಾಟಗಾರರು ಬಂದಿಳಿದ್ದಾರೆ. ಆಗಸ್ಟ್ 15ರ ಒಂದು ವಾರದ ಪೂರ್ವದಲ್ಲಿ ರಾಜ್ಯಕ್ಕೆ ಆಗಮಿಸುವ ಇವರು ಪ್ರಮುಖ ನಗರಗಳಲ್ಲಿ ಪುಟ್‌ಪಾತ್ ಮೇಲೆ, ಇನ್ನು ಕೆಲವರು ಬೀದಿ ಬೀದಿ ಸಂಚರಿಸಿ ಪಾಲಿಸ್ಟರ್ ಧ್ವಜ ಮಾರಾಟ ಮಾಡುತ್ತಾರೆ.

ಆಂಧ್ರಪ್ರದೇಶ, ಬಿಹಾರ, ತಮಿಳುನಾಡಿನಿಂದ ಅವರು ಕರ್ನಾಟಕದ ರಾಜಧಾನಿ ಬೆಂಗಳೂರು, ಧಾರವಾಡ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ವಿಜಯಪುರ, ಗದಗ, ಹಾವೇರಿ, ವಿಜಯನಗರ, ಬೀದರ ಸೇರಿದಂತೆ 20ಕ್ಕೂ ಅಧಿಕ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಪಾಲಿಸ್ಟರ್ ಧ್ವಜ ಮಾರಾಟ ಮಾಡಲು ಆಗಮಿಸಿದ್ದಾರೆ. ಇದಕ್ಕೆ ನಿಯಂತ್ರಣ ಹಾಕಿ ಎಂದು ರಾಷ್ಟ್ರ ಧ್ವಜ ಗೌರವ ಸಮಿತಿ ಸದಸ್ಯ ಭೀಮಣ್ಣ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಾರಾಟಕ್ಕಾಗಿ 2 ಲಕ್ಷಕ್ಕೂ ಅಧಿಕ ಧ್ವಜಗಳನ್ನು ತರಲಾಗಿದೆ. ಬೆಂಗಳೂರಿನಿಂದ 2 ಲಕ್ಷಕ್ಕೂ ಅಧಿಕ ಧ್ವಜಗಳು ರೈಲಿನ ಮೂಲಕ ಬಂದಿವೆ. ನಗರದಲ್ಲಿ ಪ್ರಮುಖ ರಸ್ತೆಗಳ ಪುಟ್‌ಪಾತ್ ಮೇಲೆ, ರಸ್ತೆಗಳಲ್ಲಿ ಸಂಚರಿಸಿ ಮಾರಾಟ ಮಾಡುತ್ತಿರುವ ದೃಶ್ಯ ಅವಳಿ ನಗರದಲ್ಲಿ ಕಳೆದ 2-3 ದಿನಗಳಿಂದ ಕಂಡುಬರುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ 500ಕ್ಕೂ ಅಧಿಕ ಪಾಲಿಸ್ಟರ್ ಧ್ವಜ ಮಾರಾಟಗಾರರು ಬರುತ್ತಿದ್ದಾರೆ.
ಒಟ್ಟಾರೆಯಾಗಿ ದೇಶಕ್ಕೆ ಖಾದಿಯಿಂದಲೇ ರಾಷ್ಟ್ರಧ್ವಜ ತಯಾರಿಸಿ ಪೂರೈಕೆ ಮಾಡುವ ಕರ್ನಾಟಕ ರಾಜ್ಯ ಅದರಲ್ಲೂ ಧಾರವಾಡ ಜಿಲ್ಲೆಯಲ್ಲೂ ಈಗ ಪಾಲಿಸ್ಟರ್ ತ್ರಿವರ್ಣ ಧ್ವಜದ ಹಾವಳಿ ಹೆಚ್ಚಿರುವುದು ದೇಶ ಪ್ರೇಮಿಗಳಲ್ಲಿ ನೋವುಂಟು ಮಾಡಿದೆ. ಇದೇ ರೀತಿ ಮುಂದುವರಿದಲ್ಲಿ ಖಾದಿ ಗ್ರಾಮೋದ್ಯೋಗಕ್ಕೂ ಹಾಗೂ ತ್ರಿವರ್ಣ ಧ್ವಜಕ್ಕಿರುವ ಗೌರವ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ ಕಳೆದ 2-3 ವರ್ಷಗಳಿಂದ ರಾಜ್ಯಾದ್ಯಂತ ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.












Click it and Unblock the Notifications