ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ಹುಬ್ಬಳ್ಳಿಯಲ್ಲಿ ಸಿದ್ಧರಾಮಯ್ಯ ಆಕ್ರೋಶ
ಹುಬ್ಬಳ್ಳಿ, ಜನವರಿ, 06: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ರಾಮಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಾನು ಹಿಂದೂ ವಿರೋಧಿಯಲ್ಲ, ಹಿಂದೂತ್ವದ ವಿರೋಧಿಯಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದು ನಮ್ಮ ವಿರೋಧವಾಗಿದೆ. ಪ್ರತಿ ಹಳ್ಳಿಯಲ್ಲಿ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವು ಅವನ್ನು ಕಟ್ಟಿಲ್ಲವೇ, ಸುಮ್ಮನೆ ರಾಜಕಾರಣ ಮಾಡಬಾರದು ಎಂದರು. ಹಾಗೆಯೇ ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿದರೆ ಅದು ತಪ್ಪು. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾನವಾಗಿವೆ. ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಹಿಂದೂ ವಿರೋಧಿಯಲ್ಲ, ಹಿಂದೂತ್ವದ ವಿರೋಧಿಯಾಗಿದ್ದೇನೆ ಎಂದು ಹೇಳಿದರು.
ಆರ್‌ಎಸ್‌ಎಸ್ ವಿರುದ್ಧ ಆಕ್ರೋಶ
ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಆರ್‌ಎಸ್‌ಎಸ್ ನಾಯಕರು ಭಾಗಿಯಾಗಿಲ್ಲ ಎಂಬುವಂತಹ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, 1925 ರಿಂದ 1947 ರವೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾಗಳು ಭಾಗವಹಿಸಿಲ್ಲ. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಗಂಭೀರ ಸ್ವರೂಪದಲ್ಲಿತ್ತು. ಆಗ ಆರ್‌ಎಸ್‌ಎಸ್ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದರು.

ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ?
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಅವಹೇಳನ ಮಾಡುವ ಉದ್ದೇಶದಿಂದ ನಾಯಿ ಮರಿ ಎಂದು ಹೇಳಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಬಳಿ ಅನುದಾನ ಧೈರ್ಯವಾಗಿ ಕೇಳಿ ಎಂದು ಹಳ್ಳಿಯ ಭಾಷೆಯಲ್ಲಿ ಹಾಗೇ ಹೇಳಿದ್ದೇನೆ. ಹಾಗಾದರೆ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಾಹುಲಿ ಅನ್ನುತ್ತಾರೆ ನನಗೆ ಟಗರು ಮತ್ತು ಹೌದ ಹೂಲಿಯಾ ಅನ್ನುತ್ತಾರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ? ಎಂದು ಪ್ರಶ್ನಿಸಿದರು. ಇನ್ನು ವಿಧಾನಸೌಧದಲ್ಲಿ ಹಣ ಸಿಕ್ಕಿರುವ ಬಗ್ಗೆ ಮಾತನಾಡಿದ ಅವರು, ವಿಧಾನಸೌಧಕ್ಕೆ ಎಂಜಿನಿಯರ್ ಒಬ್ಬರು ಅಲ್ಲಿಗೆ ಏಕೆ ಹಣ ತಂದಿದ್ದರು? ಸಿಎಂ ಅಥವಾ ಯಾವುದಾದರೂ ಮಂತ್ರಿಗೆ ಲಂಚ ನೀಡಲು ಹೋಗಿರಬಹುದು. ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.












Click it and Unblock the Notifications